ವಿಜಯಪುರ: ಮೊಬೈಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ಇಲ್ಲಿನ ದರ್ಗಾ ಜೈಲಿನಲ್ಲಿದ್ದ ಆರೋಪಿ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾಗಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಬಸಪ್ಪ ಸಂಜೀವಪ್ಪ ತಳವಾರ (32) ಸಾವಿಗೀಡಾದ ಆರೋಪಿಯಾಗಿದ್ದು, ಕಳೆದ ಒಂದು ವಾರದಿಂದ ದರ್ಗಾ ಜೈಲಿನಲ್ಲಿದ್ದ. ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.28 ರಂದು ಆಲಮಟ್ಟಿ ಪೊಲೀರು ಈತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರಿಂದ, ಈತನನ್ನು ದರ್ಗಾ ಜೈಲಿಗೆ ಕಳುಹಿಸಲಾಗಿತ್ತು. ಎರಡು ದಿನಗಳ ಹಿಂದೆ ತೀವ್ರ ನೋವಿನಿಂದ ಬಳಲುತ್ತಿರುವುದಕ್ಕೆ, ಈ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ. ಆದರೆ ಬಸಪ್ಪ ತಳವಾರನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ, ಈ ಕಾರಣಕ್ಕೆ ಆತ ಮೃತಪಟ್ಟಿದ್ದಾನೆ. ಆತನಿಗೆ ಯಾವುದೇ ಕಾಯಿಲೆಯೂ ಇರಲಿಲ್ಲ. ಅಲ್ಲದೆ ಆತನನ್ನು ಜೈಲಿಗೆ ಕಳಿಸಿರುವ ಕುರಿತು ಪೊಲೀಸರು ನಮಗೆ ತಿಳಿಸಿಲ್ಲ, ಯಾರದೋ ಮೂಲಕ ನಮಗೆ ಗೊತ್ತಾಯಿತು ಎಂದು ಸುರೇಶ ತಳವಾರ ಮೃತನ ಸಂಬಂಧಿ ಗಂಭೀರ ಆರೋಪ ಮಾಡಿದ್ದಾರೆ.