ವಿಜಯಪುರ: ಜಿಪಂ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸದೇ ವಿಪ್ ಉಲ್ಲಂಘಿಸಿದ ನಾಲ್ಕು ಜಿಪಂ ಸದಸ್ಯರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಯಂಕಂಚಿ ಜಿಪಂ ಸದಸ್ಯ ಮಹಾಂತಗೌಡ ಪಾಟೀಲ, ಮೋರಟಗಿ ಜಿಪಂ ಸದಸ್ಯ ಬಿಂದುರಾಯಗೌಡ ಬಿರಾದಾರ, ಇಂಗಳೇಶ್ವರ ಜಿಪಂ ಸದಸ್ಯ ಕಲ್ಲಪ್ಪ ಮಟ್ಟಿ, ಕೊಣ್ಣೂರ ಜಿಪಂ ಸದಸ್ಯೆ ಜ್ಯೋತಿ ಅಸ್ಕಿ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಚಾಟಿಸಾಗಿದೆ. ಇಲ್ಲಿನ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಭೀಮಾಶಂಕರ ಬಿರಾದಾರ ಪರವಾಗಿ ಕೈ ಎತ್ತುವ ಮೂಲಕ ಮತ ಚಲಾಯಿಸುವಂತೆ, ಚುನಾವಣೆಗೂ ಮುಂಚಿತವಾಗಿ ಜಾರಿ ಮಾಡಿದ ವಿಪ್ ಉಲ್ಲಂಘಿಸಿ, ವಿರೋಧ ಪಕ್ಷದ ಆಸೆ, ಆಮಿಷೆಗೆ ಬಲಿಯಾಗಿ, ಪಕ್ಷದ ವಿರುದ್ಧ ಮತ ಹಾಕಿ, ಪಕ್ಷಕ್ಕೆ ದ್ರೋಹ ಎಸಗಿ, ಮುಜುಗರವನ್ನುಂಟು ಮಾಡಿರುವ ಇವರನ್ನು ಉಚ್ಚಾಟಿಸಲಾಗಿದ್ದು, ಈ 4 ಜನರ ವಿರುದ್ಧ ಅತಿ ಶೀಘ್ರದಲ್ಲಿಯೇ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಸಮಿತಿಯಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.