Wednesday, July 6, 2022

Latest Posts

ವಿಜಯಪುರ | ಶೀಘ್ರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭ: ಜಿಗಜಿಣಗಿ

ವಿಜಯಪುರ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಅತಿ ಶೀಘ್ರವೇ ಆರಂಭಿಸಲಾಗುವುದು ಎಂದು ಸಂಸದ ರಮೇಶ ಜಿಗಜಿಣಗಿ ಭರವಸೆ ನೀಡಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಜಿಲ್ಲೆಯ ಬಹುದಿನಗಳ ಕನಸಾಗಿದೆ. ಈ ವಿಮಾನ ನಿಲ್ದಾಣದ ಕಾಮಗಾರಿ ಆರಂಭಿಸಿದ್ದು, ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ, ಆದರೆ ಕಾಲಾನಂತರದಲ್ಲಿ ಬಂದ ಸರ್ಕಾರಗಳು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುತವರ್ಜಿ ವಹಿಸದ ಕಾರಣ ವಿಮಾನ ನಿಲ್ದಾಣ ಕಾಮಗಾರಿ ಆರಂಭಗೊಂಡಿರಲಿಲ್ಲ. ಈಗ ವಿಮಾನ ನಿಲ್ದಾಣ ಕಾಮಗಾರಿಯನ್ನು ಒಂದು ಸವಾಲಾಗಿ ಸ್ವೀಕರಿಸಿದ್ದೇನೆ ಎಂದರು.
ಈಗಾಗಲೇ ಕಾಮಗಾರಿಗೆ ಸಂಬಂಧಿಸಿದಂತೆ ನೆಲ ಸಮತಟ್ಟು ಮಾಡುವ ಕೆಲಸ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಳ್ಳಲಿದ್ದು, ಈ ಕುರಿತಂತೆ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇನೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಕೊರೋನಾ ಸಂದರ್ಭ ಕಾಣಿಸಿಕೊಂಡಿಲ್ಲ, ಜನರಿಗೆ ಸ್ಪಂದಿಸಿಲ್ಲ ಎನ್ನುವುದು ಶುದ್ಧ ಸುಳ್ಳು. ಹೊರಗೆ ಬಾರದಿದ್ದರೂ ಸಹ ನಾನು ಜನರಿಗೆ ಸ್ಪಂದಿಸಿದ್ದೇನೆ. ಯಾರೇ ನನಗೆ ಕರೆ ಮಾಡಿದರೂ ಅವರಿಗೆ ಸ್ಪಂದಿಸಿ, ಅವರ ಸಮಸ್ಯೆಯನ್ನು ಬಗೆ ಹರಿಸಿದ್ದೇನೆ. ಪಡಿತರ ಚೀಟಿ ಇಲ್ಲದಿದ್ದರೂ ಸಹ ಪಡಿತರ ದೊರಕುವಂತಹ ವ್ಯವಸ್ಥೆ ಮಾಡಿದ್ದೇನೆ. ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕ ಮಾಡಿ ಜನರಿಗೆ ಯಾವುದೇ ರೀತಿ ತೊಂದರೆಯಾಗದಂತೆ ನೋಡಿಕೊಂಡಿದ್ದೇನೆ, ಹೊರಗೆ ಬರಲಿಲ್ಲ ಎಂದರೆ ಜನಸೇವೆ ಮಾಡಿಲ್ಲ ಎನ್ನುವುದು ಸರಿಯಲ್ಲ. ನನಗೂ ಆರೋಗ್ಯ ಸಮಸ್ಯೆಗಳಿವೆ, ಹೀಗಾಗಿ ವೈದ್ಯರ ಸಲಹೆಯಿಂದಾಗಿ ಹೊರಗೆ ಹೋಗಿಲ್ಲ, ಆದರೆ ನನ್ನ ಕರ್ತವ್ಯ ಹಾಗೂ ಸೇವೆ ಮಾತ್ರ ಎಂದಿನಂತೆ ಮುಂದುವರೆಸಿದ್ದೆ ಎಂದು ಹೇಳಿದರು.
ಎನ್‌ಟಿಪಿಸಿ ಆರಂಭ, ಮೇಲ್ಸೇತುವೆ, ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಹೀಗೆ ಅನೇಕ ಕಾಮಗಾರಿಗಳನ್ನು ಮಾಡಿರುವುದು ಜಿಲ್ಲೆಯ ಜನರಿಗೆ ಗೊತ್ತಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss