ವಿಜಯಪುರ: ಹಾವು ಕಚ್ಚಿದ ಯುವಕನಿಗೆ ಸಕಾಲಕ್ಕೆ ಚಿಕಿತ್ಸೆ ನೀಡದೇ ನಿರ್ಲಕ್ಷತೆ ವಹಿಸಿದ ಜಿಲ್ಲೆಯ ಸಿಂದಗಿ ತಾಲೂಕಿನ ಕಲಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರು ಸೇರಿದಂತೆ ನಾಲ್ವರನ್ನು ಅಮಾನತುಗೊಳಿಸಲಾಗಿದೆ.
ಇಲ್ಲಿನ ಡಾ. ರುಕ್ಸಾನಾ ಬೇಗಂ, ನರ್ಸ್ ಲಕ್ಷ್ಮೀ ಪಾಟೀಲ, ಫಾರ್ಮಸಿ ಅಧಿಕಾರಿ ಎನ್.ಬಿ. ಪಾಟೀಲ, ಡಿ ದರ್ಜೆ ನೌಕರ ಮಡಿವಾಳ ಅಖಂಡಳ್ಳಿ ಅಮಾನತುಗೊಂಡವರು.
ಸಿಂದಗಿ ತಾಲೂಕಿನ ತಿಳಗುಳ ಗ್ರಾಮದ ಕಾಳಪ್ಪ ದೊಡಮನಿ (20) ಎಂಬ ಯುವಕನಿಗೆ ಹಾವು ಕಚ್ಚಿದ್ದರಿಂದ, ಕಲಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಕ್ಕೆ ಚಿಕಿತ್ಸೆಗೆ ಕರೆತರಲಾಗಿದೆ. ಈ ಸಂದರ್ಭ ಕಲಕೇರಿ ಕೇಂದ್ರದ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡದೇ ನಿರ್ಲಕ್ಷತೆ ವಹಿಸಿದಕ್ಕೆ ಯುವಕ ಮೃತಪಟ್ಟಿದ್ದಾನೆ ಎಂದು ಆಕ್ರೋಶಗೊಂಡ ಯುವಕನ ಪೋಷಕರು ಆಸ್ಪತ್ರೆ ಗೇಟ್ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಸುದ್ದಿಯಾಗುತ್ತಿದ್ದಂತೆ, ಈ ಘಟನೆಗೆ ಸಂಬಂಧಿಸಿದ ಓರ್ವ ವೈದ್ಯೆ ಸೇರಿದಂತೆ ನಾಲ್ವರನ್ನು ಡಿಎಚ್ಒ ಮಹೇಂದ್ರ ಕಾಪ್ಸೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.