Thursday, June 30, 2022

Latest Posts

ವಿಜಯಪುರ| ಹೊಸ ಶಿಕ್ಷಣ ನೀತಿ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ವಿಜಯಪುರ: ರಾಷ್ಟ್ರೀಯ ಹೊಸ ಶಿಕ್ಷಣ ನೀತಿ-2020 ನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಕೆಲ ಹೊತ್ತು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಸಂಚಾಲಕ ವಿ.ಎ. ಪಾಟೀಲ ಮಾತನಾಡಿ, ಹಲವು ಶಿಕ್ಷಣ ತಜ್ಞರು, ವಿಜ್ಞಾನಿಗಳು, ಬುದ್ಧಿಜೀವಿಗಳು, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಹಾಗೂ ದೇಶ ನಿವಾಸಿಗಳ ಅಮೂಲ್ಯ ಅಭಿಪ್ರಾಯ ಮತ್ತು ವಿರೋಧಗಳನ್ನು ಕಡೆಗಣಿಸಿ, ಕೇಂದ್ರ ಸಚಿವ ಸಂಪುಟ ರಾಷ್ಟ್ರೀಯ ಶಿಕ್ಷಣ ನೀತಿ-2020ಗೆ ಅನುಮೋದನೆ ನೀಡಿರುವುದು ಸರಿಯಲ್ಲ. ಕೋವಿಡ್-19 ಪಿಡುಗಿನಿಂದಾಗಿ ಇಡೀ ದೇಶವೇ ಆತಂಕದಲ್ಲಿರುವ ಸಂದರ್ಭ ಶಿಕ್ಷಣ ವ್ಯವಸ್ಥೆಗೆ ಸಂಬಂಧಿಸಿದ ಮಹತ್ತರವಾದ ನೀತಿ ಜಾರಿಗೊಳಿಸಲು ಹೊರಟಿದೆ. ಶಿಕ್ಷಣವು ಸರ್ಕಾರಿ ಮತ್ತು ಖಾಸಗಿ ಜನರ ಜವಾಬ್ದಾರಿಯಾಗಿದೆ ಎಂದು ಭಾರತೀಯ ವಿಷಯಗಳನ್ನು ಕಲಿಸುವ ಹೆಸರಿನಲ್ಲಿ ಎನ್‌ಇಪಿ-2020 ಗಣಿತ, ವಾಸ್ತುಶಿಲ್ಪ, ದೇಶಿಔಷಧ, ಇಂಜಿನಿಯರಿಂಗ್, ಭಾಷಾಶಾಸ್ತ್ರ ಇತ್ಯಾದಿಗಳಲ್ಲಿ ಸ್ಥಳೀಯ ಮತ್ತು ಸಾಂಪ್ರದಾಯಿತಕ ಕಲಿಕೆಯ ವಿಧಾನಗಳನ್ನು ಸೇರಿಸಲು ಉದ್ದೇಶಿಸಿದೆ. ನಮ್ಮ ಸಾಂಪ್ರದಾಯಿಕ ಕಲಿಕೆ ಎಷ್ಟೇ ಪ್ರಿಯವಾಗಿದ್ದರೂ, ಅದು ತಾರತಮ್ಯ ಮತ್ತು ಅವೈಜ್ಞಾನಿಕ. ಜಾತಿ ಶ್ರೇಣಿ ಮತ್ತು ಕುರುಡುತನವನ್ನು ಆಧರಿಸಿದೆ. 3 ರಿಂದ 6 ವರ್ಷಗಳನ್ನು ಔಪಚಾರಿಕ ಶಾಲಾ ಶಿಕ್ಷಣಕ್ಕೆ ಒಳಪಡಿಸುವುದು, ಅಧಿಕಾರ ಕೇಂದ್ರೀಕೃತ ಎಚ್‌ಇಸಿಐ ರಚಿಸುವುದು, ಬಹು ಶಿಸ್ತಿನ ಕೋರ್ಸ್ಗಳನ್ನು ಪರಿಚಯಿಸುವುದು ಮೊದಲಾದ ಅಂಶಗಳು ಶಿಕ್ಷಣವನ್ನು ಮೌಲ್ಯವಾಗಿಸುವ ಬದಲು ಸರಕನ್ನಾಗಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಸಹ ಸಂಚಾಲಕ ಎಚ್.ಟಿ. ಭರತಕುಮಾರ ಮಾತನಾಡಿ, ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣವು ಇಂದಿಗೂ ಒಂದು ಘೋಷಣೆಯಾಗಿಯೇ ಇದೆ. ವಿಶ್ವವಿದ್ಯಾಲಯಗಳಿಗೆ ಅನುದಾನದ ಕೊರತೆಯಿಂದ ವಿಶ್ವವಿದ್ಯಾಲಯಗಳು ಮುಚ್ಚುವ ಸ್ಥಿತಿಯಲ್ಲಿವೆ. ಅದಕ್ಕೆ ಅನುದಾನ ಬಿಡುಗಡೆ ಮಾಡದೆ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಹೊರಟಿರುವುದು ವಿಪರ್ಯಾಸದ ಸಂಗತಿ ಎಂದರು.
ಮುಖಂಡರಾದ ಸಿದ್ದಲಿಂಗ ಬಾಗೇವಾಡಿ, ಗುರುರಾಜ ಬೊಮ್ಮನಹಳ್ಳಿ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss