Wednesday, August 10, 2022

Latest Posts

ವಿದ್ಯಾರ್ಥಿಗಳಿಗೆ ಪಾಠ ಮಾಡಿ ಗಮನ ಸೆಳೆದ ಜಿಲ್ಲಾಧಿಕಾರಿ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ನೂತನ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಂಗಳವಾರ ಕೆಲ ಸಮಯ ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಗಮನ ಸೆಳೆದರು.
ನಗರದ ವಿವಿಧ ವಾರ್ಡ್‍ಗಳಿಗೆ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಪರಿಶೀಲಿಸುತ್ತಿದ್ದ ಅವರು ದಿಢೀರನೆ ನಗರದ ಬಸವನಹಳ್ಳಿ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದರು.
ನೇರವಾಗಿ ದ್ವಿತೀಯ ಪಿ.ಯು. ವಿಜ್ಞಾನ ತರಗತಿಯ ಕೊಠಡಿಯೊಂದಕ್ಕೆ ತೆರಳಿದ ಅವರು, ವಿದ್ಯಾರ್ಥಿಗಳೊಂದಿಗೆ ಪರಿಚಯಿಸಿಕೊಂಡು ಸಂವಾದ ನಡೆಸಿದರು, ಓದು, ಬರಹ, ಪರೀಕ್ಷೆ, ಅಭ್ಯಾಸ, ಅಧ್ಯಯನಗಳ ಕುರಿತು ಮಕ್ತವಾಗಿ ವಿದ್ಯಾರ್ಥಿಗಳ ಜೊತೆ ಚರ್ಚಿಸಿದ ಜಿಲ್ಲಾಧಿಕಾರಿಗಳು ಕೆಲವೊಂದು ಉಪಯುಕ್ತ ಟಿಪ್ಸ್‍ಗಳನ್ನೂ ನೀಡಿದರು. ನಂತರ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯವೊಂದರ ಬಗ್ಗೆ ಬೋರ್ಡ್ ಮೇಲೆ ಬರೆದು ಪಾಠ ಮಾಡಿದರು.
ಜಿಲ್ಲಾಧಿಕಾರಿಯೊಬ್ಬರು ದಿಢೀರನೆ ಭೇಟಿ ನೀಡಿದ ಕಾರಣಕ್ಕೆ ಅಲ್ಲಿದ್ದ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಕೆಲವು ಕ್ಷಣ ಗಲಿಬಿಲಿ ಗೊಂಡರು ಆದರೆ ಅವರು ವಿದ್ಯಾರ್ಥಿಗಳ ಪಾಲಿಗೆ ಉಪನ್ಯಾಸಕರಾಗಿ ಸಲಹೆ, ಸೂಚನೆ ನೀಡುವ ಮೂಲಕ ಸರಳತೆ ಮೆರೆದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಒಂದು ವಿಷಯವನ್ನು ಸರಳವಾಗಿ ಹೇಗೆ ಅರ್ಥ ಮಾಡಿಕೊಳ್ಳಬೇಕು ಎನ್ನುವ ವಿಧಾನದ ಬಗ್ಗೆಯೂ ಬೋರ್ಡ್ ಮೇಲೆ ಬರದು ತಿಳಿಸಿದರು. ಅಲ್ಲದೆ ಮುಂದೆ ವಿದ್ಯಾರ್ಥಿಗಳಿ ಉದ್ಯೋಗಾಧಾರಿತ ಕೋರ್ಸ್‍ಗಳ ಆಯ್ಕೆಯ ಕುರಿತು ವಿಷಯ ತಜ್ಞರನ್ನು ಕರೆಸಿ ಶಿಬಿರವನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ ಸಹ ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆಗಳನ್ನು ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಪ್ಪ, ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಪಾಂಶುಪಾಲರಾದ ಎಸ್.ಜೆ. ಸಾವಿತ್ರಿ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss