ಹೊಸದಿಗಂತ ವರದಿ, ಕಾಸರಗೋಡು:
ಕೇರಳದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಏರಿಕೆಯಾಗುತ್ತಿದೆ ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಗಡಿಗಳಲ್ಲಿ ಕೊರೋನಾ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದ್ದು , ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ಇತರ ರೋಗಿಗಳು, ವ್ಯಾಪಾರಿಗಳು ಹಾಗೂ ನಿತ್ಯ ಪ್ರಯಾಣಿಕರು ಭಾರೀ ಸಮಸ್ಯೆ ಎದುರಿಸುವಂತಾಗಿದೆ.
ಕೊರೋನಾ ಲಾಕ್ಡೌನ್ನ ಬಳಿಕ ಇಲ್ಲಿಯ ವರೆಗೆ ಜಿಲ್ಲೆಯ ಆರ್ಥಿಕ ವ್ಯವಸ್ಥೆಯು ಸರಿಯಾದ ರೀತಿಯಲ್ಲಿ ಪುನಶ್ಚೇತನಗೊಂಡಿಲ್ಲ. ಅಲ್ಲದೆ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅದರ ಜೊತೆಯಲ್ಲಿ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳುವ ನಿತ್ಯ ಪ್ರಯಾಣಿಕರನ್ನು ಕೋವಿಡ್ ನೆಪದಲ್ಲಿ ಹಿಂಸಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಗಡಿ ನಿರ್ಬಂಧದಲ್ಲಿ ಇನ್ನಷ್ಟು ಸಡಿಲಿಕೆ ನೀಡಬೇಕೆಂದು ಕಾಸರಗೋಡು ಜಿಲ್ಲೆಯ ಸಾರ್ವಜನಿಕ ವಲಯವು ಆಗ್ರಹಿಸಿದೆ.
ಕೇರಳದಲ್ಲಿ ಹೆಚ್ಚುತ್ತಿರುವ ಕೊರೋನಾ ಬಾಧಿತರು
ಕಳೆದ ಎರಡು ತಿಂಗಳಿನಿಂದೀಚೆಗೆ ಕೇರಳದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸಾವಿನ ಸಂಖ್ಯೆಯಲ್ಲಿ ಏರಿಕೆ ಇರದಿದ್ದರೂ ಕೊರೋನಾ ಪೀಡಿತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದೆಡೆ ರಾಜ್ಯದಲ್ಲಿ ಕೋವಿಡ್ ಪರೀಕ್ಷಾ ಸಂಖ್ಯೆಯು ಕಡಿಮೆಯಿದ್ದು , ಇನ್ನೊಂದೆಡೆ ತಪಾಸಣೆಗೊಳಗಾದ ಬಹುತೇಕ ಮಂದಿಗೆ ಸೋಂಕು ಬಾಧಿಸಿರುವುದು ಆತಂಕಕ್ಕೂ ಕಾರಣವಾಗಿದೆ.
ಇದೆಲ್ಲದರ ನಡುವೆ ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚಿದ್ದರೂ ನಿಯಂತ್ರಣದಲ್ಲಿದೆ. ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ , ಟಾಟಾ ಕೋವಿಡ್ ಆಸ್ಪತ್ರೆ , ಜನರಲ್ ಆಸ್ಪತ್ರೆ , ಉಕ್ಕಿನಡ್ಕ ಜಿಲ್ಲಾ ಮೆಡಿಕಲ್ ಕಾಲೇಜು, ಮಂಜೇಶ್ವರ ತಾಲೂಕು ಆಸ್ಪತ್ರೆ ಮುಂತಾದ ಕಡೆಗಳಲ್ಲಿ ಕೋವಿಡ್ ತಪಾಸಣೆಯನ್ನು ನಡೆಸಿ ಸೋಂಕನ್ನು ಹತೋಟಿಗೆ ತರಲಾಗಿದೆ. ಕೇರಳ ಸರಕಾರವು ರಾಜ್ಯದಲ್ಲಿ ಕೋವಿಡ್ ರೋಗವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸಮರ್ಪಕ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕೋವಿಡ್ ಹತೋಟಿಯ ವಿಷಯದಲ್ಲಿ ರಾಜ್ಯದ ಆರೋಗ್ಯ ಸಚಿವಾಲಯವನ್ನು ವಿಶ್ವಸಂಸ್ಥೆಯ ಇತ್ತೀಚೆಗೆ ಕೊಂಡಾಡಿದ್ದರೂ ಇಲ್ಲಿನ ಪರಿಸ್ಥಿತಿ ಭಿನ್ನವೇ ಆಗಿದೆ. ದಿನವೊಂದಕ್ಕೆ ಸಾವಿರಾರು ಮಂದಿಗೆ ಕೋವಿಡ್ ಪರೀಕ್ಷೆಯನ್ನು ನಡೆಸಿ ಸಮರ್ಪಕ ರೀತಿಯಲ್ಲಿ ರೋಗ ವಾಸಿಯಾಗುವ ಕ್ರಮಗಳನ್ನು ಕೈಗೊಂಡರೆ ಮಾತ್ರ ಕೇರಳದಲ್ಲಿ ಕೊರೋನಾವನ್ನು ನಿಯಂತ್ರಣಕ್ಕೆ ತರಬಹುದಾಗಿದೆ.