Sunday, April 18, 2021

Latest Posts

ವಿಧಾನಮಂಡಲದ ಅಧಿವೇಶನಕ್ಕಿಲ್ಲ ವೈರಾಣು ಭೀತಿ

ಬೆಂಗಳೂರು: ಕೊರೋನಾ ಮಹಾಮಾರಿಯ ಉಪಟಳ ದಿನೇ ದಿನೇ ಹೆಚ್ಚುತ್ತಲೇ ಇದ್ದು, ಭಾನುವಾರ ಒಂದು ದಿನದ ಜನತಾ ಕರ್ಫ್ಯೂ ಇನ್ನೂ ಎಷ್ಟು ದಿನ ಮುಂದುವರಿಯಲಿದೆಯೋ ಎಂಬ ಚಿಂತೆ ಕಾಡಲು ಶುರುವಾಗಿದೆ.

ದೇಶಾದ್ಯಂತ 400 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, 8 ಸಾವು ಪ್ರಕರಣಗಳು ವರದಿಯಾಗಿವೆ. ಒಂದೇ ದಿನದಲ್ಲಿ ಮೂವರು ಕೊರೋನಾ ಸೋಂಕಿತರು ಸಾವಿಗೀಡಾಗಿರುವುದು ಇನ್ನಷ್ಟು  ಹೆದರಿಕೆಗೆ ಕಾರಣವಾಗಿದ್ದು, ಎಚ್ಚರಿಕೆಯ ಕ್ರಮಗಳನ್ನು ಇನ್ನಷ್ಟು ಬಿಗಿಗೊಳಿಸಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗುತ್ತಿದೆ.

ಅದರಲ್ಲೂ ಕರ್ನಾಟಕದಲ್ಲಿ 27 ಪತ್ತೆಯಾಗಿದ್ದು, ಭಾನುವಾರ ಒಂದೇ ದಿನದಲ್ಲಿ 6 ಪ್ರಕರಣಗಳು ವರದಿಯಾಗಿರುವುದೂ ನಾಡಿನ ಜನರಲ್ಲಿ ಆತಂಕ ಉಂಟು ಮಾಡಿದೆ. ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಜನತಾ ಕರ್ಫ್ಯೂ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯನ್ನು ಮುಂದುವರಿಸುವುದೇ ಒಳಿತು ಎಂಬ ಕೂಗು ಕೇಳಿಬರಲಾರಂಭಿಸಿದೆ.

ಈ ನಡುವೆ ರಾಜ್ಯ ವಿಧಾನಮಂಡಲ ಅಧಿವೇಶನ ಸೋಮವಾರ ನಡೆಯುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಊರಿಗೆಲ್ಲ ಉಪದೇಶ ಮಾಡುತ್ತಿರುವ ಸರ್ಕಾರ, ಅಧಿವೇಶನ ಮೊಟಕುಗೊಳಿಸಬಾರದೇಕೆ ಎಂಬ ಸಾರ್ವಜನಿಕ ಅಸಮಾಧಾನವೂ ವ್ಯಕ್ತವಾಗಿದೆ.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2020-21 ನೇ ಸಾಲಿಗಾಗಿ ಮಂಡಿಸಿರುವ 2.37 ಲಕ್ಷ ಕೋಟಿ ರೂ.ಗಳ ಬಜೆಟ್ ಕುರಿತು ಚರ್ಚೆ ಆರಂಭವಾಗಿದ್ದು, ತಾತ್ಕಾಲಿಕವಾಗಿ ಕೆಲ ತಿಂಗಳ ಮಟ್ಟಿಗಾದರೂ ಲೇಖಾನುದಾನ ಪಡೆದುಕೊಂಡು, ಕೊರೋನಾ ಭೀತಿ ತಗ್ಗಿದ ಬಳಿಕ ಅಧಿವೇಶನ ಸಮಾವೇಶಗೊಳ್ಳಬಹುದು ಎಂಬ ಸಲಹೆಗಳೂ ಕೇಳಿಬಂದಿವೆ.

ಈ ವಿಚಾರದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಕೆ. ಪಾಟೀಲ್ ಕೂಡ ಅಧಿವೇಶನ ಮುಂದೂಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss