ಹೊಸದಿಗಂತ ಆನ್ಲೈನ್ ಡೆಸ್ಕ್:
ಧಾರವಾಡದ ಜಿಪಂ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಗುರುವಾರ ಬೆಳಗಾವಿಯ ಹಿಂಡಲಗಾ ಜೈಲು ಸೇರಿದ್ದು, ಗುರುವಾರ ರಾತ್ರಿ ಇಡೀ ನಿದ್ದೆ, ಊಟವಿಲ್ಲದೇ ಕಾಲ ಕಳೆದಿದ್ದಾರೆ.
ಹಿಂಡಲಗಾ ಜೈಲಿನಲ್ಲಿರುವ ರೆಡ್ ಝೋನ್ ಸೆಲ್ನಲ್ಲಿ ಇರುವ ವಿನಯ ಕುಲಕರ್ಣಿ, ಸಾಮಾನ್ಯ ಕೈದಿಯಂತೆ ಒಂದು ರಾತ್ರಿ ಕಳೆದಿದ್ದಾರೆ. ಸೊಳ್ಳೆ ಕಾಟದ ಜೊತೆಗೆ ಊಟವೂ ಇಲ್ಲದೇ, ರಾತ್ರಿಯಿಡೀ ನಿದ್ದೆ ಮಾಡದೆ ಕಾಲ ಕಳೆದಿದ್ದಾರೆ ಎನ್ನಲಾಗಿದೆ.
ಶನಿವಾರ ವಿನಯ ಕುಲಕರ್ಣಿಯವರ 55ನೇ ವರ್ಷದ ಹುಟ್ಟು ಹಬ್ಬವಿದ್ದು, ಅಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಸೇರುವ ಸಾಧ್ಯತೆಯಿರುವುದರಿಂದ ಹಿಂಡಲಗಾ ಜೈಲಿನ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಶುಕ್ರವಾರ ಕೂಡ ಧಾರವಾಡ ಕೋರ್ಟ್ನ ನ್ಯಾಯಾಧೀಶರು ವಿಡಿಯೋ ಕಾನ್ಪರೇಷನ್ ಮೂಲಕವೇ ಜೈಲು ಕೊಠಡಿಯಲ್ಲಿಯೇ ವಿನಯ ಕುಲಕರ್ಣಿಯವರ ವಿಚಾರಣೆ ನಡೆಸಲಿದ್ದು, ಸಿಬಿಐ ಮತ್ತೆ ತನ್ನ ವಶಕ್ಕೆ ಪಡೆಯುವ ಸಾಧ್ಯತೆ ಇರುವುದರಿಂದ ಮತ್ತೆ ವಶಕ್ಕೆ ಪಡೆದರೆ ಶನಿವಾರ ಜೈಲಿನಲ್ಲಿಯೇ ಮಾಜಿ ಸಚಿವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗುತ್ತದೆ.