Sunday, June 26, 2022

Latest Posts

ವಿಮಾನದಲ್ಲೇ ಮನೆ ಮಾಡಲು ರೆಡಿಯಾಗಿತ್ತು ಜೇನಿನ ದಂಡು !

ಹೊಸ ದಿಗಂತ ಆನ್ ಲೈನ್ ಡೆಸ್ಕ್ :

ಜೇನ್ನೊಣಗಳು ಒಂದೇ ಕಂಪೆನಿಯ ಎರಡು ವಿಮಾನಗಳಿಗೆ ಮುತ್ತಿಗೆ ಹಾಕಿದ ಪರಿಣಾಮ , ವಿಮಾನಗಳ ಹಾರಾಟ ಗಂಟೆಗಳ ಕಾಲ ವಿಳಂಬಗೊಂಡ ಘಟನೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಒಂದಲ್ಲ ಸತತ ಎರಡು ದಿನ ಸಂಭವಿಸಿದೆ. ಭಾನುವಾರ ಸಂಜೆ ಮತ್ತು ಸೋಮವಾರ ಬೆಳಗ್ಗೆ ಈ ತೆರ ಗೊಂದಲ ಸೃಷ್ಟಿಯಾಗಿತ್ತು.
ವಿಸ್ತಾರ ಏರ್‌ಲೈನ್ಸ್‌ನ ಎರಡು ವಿಮಾನಗಳು ವಿಮಾನ ನಿಲ್ದಾಣದ ನಿರ್ದಿಷ್ಟ ತಂಗುದಾಣದಲ್ಲಿ ವಿರಮಿಸಿದ್ದವು. ಈ ಪೈಕಿ ಭಾನುವಾರ ಸಂಜೆ ೫.೩೦ರ ಸುಮಾರಿಗೆ ದಿಲ್ಲಿಗೆ ಹೊರಡಬೇಕಿದ್ದ ವಿಮಾನದಲ್ಲಿ ಸಹಸ್ರಾರು ಜೇನ್ನೊಣಗಳು ಬೀಡುಬಿಟ್ಟಿದ್ದವು. ವಿಮಾನದ ಹೊರಮೈಯಲ್ಲಿ ಗೂಡು ಕಟ್ಟುವುದು ಇವುಗಳ ಪ್ಲ್ಯಾನ್ ಆಗಿತ್ತು. ಅದೃಷ್ಟವಶಾತ್ ಸಂಜೆ ೪ರ ಸುಮಾರಿಗೆ ಈ ಅಪಾಯ ವಿಮಾನದ ಸಿಬ್ಬಂದಿಗಳ ಗಮನಕ್ಕೆ ಬಂತು. ಪ್ರಯಾಣಿಕರು ಇನ್ನೇನು ವಿಮಾನಕ್ಕೆ ಹತ್ತಲು ಅಣಿಯಾಗುತ್ತಿದ್ದರು. ತಕ್ಷಣವೇ ಪ್ರಯಾಣಿಕರನ್ನು ವಿಮಾನ ಹತ್ತದಂತೆ ತಡೆಯಲಾಯಿತು ಮತ್ತು ಅಗ್ನಿಶಾಮಕ ದಳದ ಜಲಫಿರಂಗಿ ಬಳಸಿ, ಅರ್ಧ ತಾಸು ನೀರು ಹಾಯಿಸಿ ಜೇನ್ನೊಣಗಳನ್ನು ಚದುರಿಸಲಾಯಿತು. ಸಹಸ್ರಾರು ಜೇನ್ನೊಣಗಳ ದಂಡು ಕೊನೆಗೂ ಚದುರಿದ ನಂತರ ಒಂದು ಗಂಟೆ ತಡವಾಗಿ ವಿಮಾನ ದಿಲ್ಲಿಯತ್ತ ಹೊರಟಿತು.
ಅಬ್ಬಾ ಸಮಸ್ಯೆ ಮುಗಿಯಿತೆಂದು ವಿಮಾನ ಸಿಬ್ಬಂದಿಗಳು, ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದರು. ಆದರೆ ನೀರಿನ ರಭಸಕ್ಕೆ ಚದುರಿದ ಜೇನ್ನೊಣಗಳು ಬಲು ದೂರಕ್ಕೆ ಹಾರಿರಲಿಲ್ಲ. ಬದಲಾಗಿ ಅದೇ ತಂಗುದಾಣದಲ್ಲಿದ್ದ ವಿಸ್ತಾರ ಏರ್‌ಲೈನ್ಸ್‌ನ ಇನ್ನೊಂದು ವಿಮಾನಕ್ಕೆ ವಲಸೆ ಹೋಗಿದ್ದವು. ಈ ವಿಮಾನ ಸೋಮವಾರ ಬೆಳಗ್ಗೆ ೧೦.೩೦ಕ್ಕೆ ಪೋರ್ಟ್‌ಬ್ಲೇರ್‌ಗೆ ಹೊರಡುವುದಿತ್ತು. ಪ್ರಯಾಣಿಕರ ಸರಕುಗಳನ್ನು ಇಡುವ ಭಾಗದಲ್ಲೇ ಇವು ಭಾರೀ ಸಂಖ್ಯೆಯಲ್ಲಿ ದಟ್ಟೈಸಿದ್ದ ಕಾರಣ ,ಕಾರ್ಮಿಕರು ಹೆದರಿ ವಿಮಾನದತ್ತ ಸುಳಿಯಲಿಲ್ಲ. ಕೊನೆಗೆ ಮತ್ತೆ ಅಗ್ನಿಶಾಮಕ-ಜಲಫಿರಂಗಿ ಕರೆಸಿ ಸತತ ನೀರು ಹಾಯಿಸಿ ಇವನ್ನು ಚದುರಿಸಲಾಯಿತು. ಈ ವಿಮಾನವೂ ಒಂದು ಗಂಟೆ ತಡವಾಗಿ ಅಂದರೆ ೧೧.೩೦ರ ಸುಮಾರಿಗೆ ಪೋರ್ಟ್‌ಬ್ಲೇರ್‌ಗೆ ಹೊರಟಿತು. ವಿಚಿತ್ರವೆಂದರೆ , ನಿಲ್ದಾಣದಲ್ಲಿ ಬೇರೆ ಬೇರೆ ವಿಮಾನ ಕಂಪೆನಿಗಳ ವಿಮಾನಗಳಿದ್ದರೂ ಜೇನ್ನೊಣಗಳು ಅತ್ತ ಸುಳಿದಿಲ್ಲ. ಗೂಡು ಕಟ್ಟಲು ವಿಸ್ತಾರ ಕಂಪನಿಯ ವಿಮಾನಗಳನ್ನೇ ಆರಿಸಿದ್ದವು !
ಬಲು ಅಪಾಯಕಾರಿ
ವಿಮಾನದ ಪೈಲಟ್‌ಗಳ ಪ್ರಕಾರ, ಪ್ರತೀ ವಿಮಾನದಲ್ಲೂ ಅತಿ ಸೂಕ್ಷ್ಮ ಶೋಧಕಗಳಿವೆ. ಇವು ವಿಮಾನದ ಸುತ್ತ ಗಾಳಿಯ ಒಟ್ಟು ಒತ್ತಡ ಎಷ್ಟಿದೆ ಎಂಬುದನ್ನು ಗ್ರಹಿಸಿ ಪೈಲಟ್‌ಗಳಿಗೆ ಮಾಹಿತಿ ಕೊಡುತ್ತಿರುತ್ತದೆ. ಇವು ಅದೆಷ್ಟು ಸೂಕ್ಷ್ಮ ಶೋಧಕಗಳೆಂದರೆ ಇವುಗಳೊಳಕ್ಕೆ ಒಂದೇ ಒಂದು ಜೇನ್ನೊಣ ಅಥವಾ ಇನ್ನಿತರ ಸೂಕ್ಷ್ಮ ಕೀಟ ಪ್ರವೇಶಿಸಿದರೂ, ಇಂಡಿಕೇಟರ್‌ಗಳು ಗಾಳಿಯ ಒತ್ತಡದ ಬಗ್ಗೆ ತಪ್ಪುತಪ್ಪು ಮಾಹಿತಿ ಕೊಡುವ ಅಪಾಯವಿದೆ.
ಜೇನ್ನೊಣಗಳು ಸತತವಾಗಿ ವಿಮಾನ ಹತ್ತಿರುವ ಹಿನ್ನೆಲೆಯಲ್ಲಿ , ನಿಲ್ದಾಣ ಪರಿಸರದಲ್ಲಿ ಕೊಂಚ ಆತಂಕ ನೆಲೆಸಿದೆ. ನಿಲ್ದಾಣದ ಯಾವುದಾದರು ಭಾಗದಲ್ಲಿ ಇವು ಗೂಡು ಕಟ್ಟಿರಬಹುದೋ ಎಂಬ ಆತಂಕದಿಂದ ನಿಲ್ದಾಣ ಪರಿಸರ, ಟರ್ಮಿನಲ್ ಕಟ್ಟಡ ಎಲ್ಲ ಕಡೆ ಪರಿಶೀಲಿಸಲಾಗಿದೆ. ಕೀಟನಾಶಕಗಳನ್ನು ಸಿಂಪಡಿಸಲಾಗಿದೆ. ಆದರೆ ಎಲ್ಲೂ ಜೇನುಗೂಡು ಪತ್ತೆಯಾಗಿಲ್ಲ.
ಈ ತೆರ ಆಗ್ತಿರೋದು ಇದು ತೃತೀಯ ಬಾರಿ
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಈ ತೆರ ಘಟನೆ ಹೊಸತಲ್ಲ ಅಥವಾ ಇದು ತೃತೀಯ ಬಾರಿ. ಕಳೆದ ಸೆಪ್ಟೆಂಬರ್‌ನಲ್ಲಿ ಜೇನ್ನೊಣಗಳು ಏರ್ ಇಂಡಿಯಾದ ವಿಮಾನಕ್ಕೆ ದಾಳಿ ಮಾಡಿದ್ದವು.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss