Saturday, July 2, 2022

Latest Posts

ವಿಮಾ ರಕ್ಷಣೆ ಸೌಲಭ್ಯ ನೀಡಲು ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣಾಚಾರ್ ಒತ್ತಾಯ

ಚಿತ್ರದುರ್ಗ: ಕೋವಿಡ್-೧೯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಸೇವಾ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರಿಗೆ ನೀಡಿರುವ ವಿಮಾ ರಕ್ಷಣೆ ಸೌಲಭ್ಯ ಒದಗಿಸಬೇಕೆಂದು ರಾಜ್ಯ ನಿವೃತ್ತ ಪೌರ ನೌಕರರು ಹಾಗೂ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್.ನಾರಾಯಣಾಚಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂವಿಧಾನಾತ್ಮಕ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಸರ್ಕಾರಿ ನೌಕರರಿಗೆ ಅನ್ವಯವಾಗುವ ಕರ್ನಾಟಕ ನಾಗರಿಕ ಸೇವಾ ನಿಯಮ ೧೯೫೮, ಕರ್ನಾಟಕ (ನೌಕರರ ವರ್ಗೀಕರಣ ಹಾಗೂ ನಿಯಂತ್ರಣ) ನಿಯಮ ೧೯೫೭ ಮತ್ತು ಇತರೆ ಎಲ್ಲಾ ನಿಯಮಗಳು ಅನ್ವಯವಾಗುತ್ತ್ತಿವೆ. ಅದರಂತೆ ಕರ್ನಾಟಕ ಸರ್ಕಾರಿ ನೌಕರರ (ಮೆಡಿಕಲ್ ಅಟೆಂಡಸ್) ನಿಯಮ ಸಹ ಪೌರಸೇವಾ ನೌಕರರಿಗೆ ಅನ್ವಯವಾಗುತ್ತಿದೆ.
ಕರ್ನಾಟಕ ಸರ್ಕಾರಿ ನೌಕರರ (ಮೆಡಿಕಲ್ ಅಟೆಂಡಸ್) ನಿಯಮ ೧೯೬೩ಕ್ಕೆ ೨೦೧೪ ರಲ್ಲಿ ತಿದ್ದುಪಡಿ ತಂದು, ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ ತರಲಾಗಿದೆ. ಆದರೆ ಇದನ್ನು ಪೌರಸೇವಾ ನೌಕರರಿಗೆ ವಿಸ್ತರಿಸಲಾಗಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರಿ ನೌಕರರಿಗೆ ದೊರೆಯುವ ವೈದ್ಯಕೀಯ ಸೇವೆಗಳು, ಪೌರಸೇವಾ ನೌಕರರಿಗೆ ದೊರೆಯುತ್ತಿಲ್ಲ. ಆಸ್ಪತ್ರೆಯ ವೆಚ್ಚ ಭರಿಸಲಾಗದೆ ಎಷ್ಟೋ ಜನ ಪೌರಸೇವಾ ನೌಕರರು ಅಸುನೀಗಿದ ಪ್ರಕರಣಗಳು ಸಾಕಷ್ಟಿವೆ.
ಪೌರಸೇವಾ ನೌಕರರು ನಿಯಮದಂತೆ ಆಸ್ಪತ್ರೆ ವೆಚ್ಚದ ಬಿಲ್‌ಗಳನ್ನು ಸಲ್ಲಿಸಿ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಆಸ್ಪತ್ರೆ ವೆಚ್ಚದ ಬಿಲ್‌ಗಳನ್ನು ಸಲ್ಲಿಸಿ ಹಣ ಪಡೆಯಲು ಕಚೇರಿಯಿಂದ ಕಚೇರಿಗೆ ತಿರುಗಿ, ಕೌನ್ಸಿಲ್ ಅನುಮೋದನೆ, ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಬಿಲ್ ಪಡೆಯುವಲ್ಲಿ ಆರು ತಿಂಗಳಿನಿಂದ ಒಂದು ವರ್ಷ ತಡವಾಗುತ್ತಿದೆ. ಆದಾಗ್ಯೂ ವೆಚ್ಚ ಮಾಡಿದ ಹಣದಲ್ಲಿ ಶೇ ೬೦ ರಷ್ಟು ಮಾತ್ರ ಕೈಗೆ ಸಿಗುತ್ತಿದೆ. ಇದರಿಂದಾಗಿ ಪೌರಸೇವಾ ನೌಕರರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯುತ್ತಿಲ್ಲ.
ಅಲ್ಲದೇ ಕೋವಿಡ್-೧೯ ರಡಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್‌ನಲ್ಲಿ ವಿಮೆಯನ್ನು ಘೋಷಿಸಿವೆ. ಆದರೆ ಈ ಸೌಲಭ್ಯವೂ ಸಹ ಪೌರಸೇವಾ ನೌಕರರಿಗೆ ಇಲ್ಲದಾಗಿದೆ. ಸ್ವಚ್ಛತೆ, ಆರೋಗ್ಯ, ನೀರು ಸರಬರಾಜು ಸೇರಿದಂತೆ ಅಗತ್ಯ ನಾಗರಿಕ ಸೌಲಭ್ಯ ಒದಗಿಸುವಲ್ಲಿ ಪೌರಸೇವಾ ನೌಕರರು ಸತತವಾಗಿ ದುಡಿಯುತ್ತಿದ್ದಾರೆ. ಯಾವುದೇ ರಕ್ಷಣೆ ಇಲ್ಲದೆ ಕೆಲಸ ಮಾಡುವ ಪೌರಸೇವಾ ನೌಕರರಿಗೆ ಇತರೆ ಇಲಾಖೆಗಳ ಸಿಬ್ಬಂದಿ ನೀಡುವ ಸೌಲಭ್ಯಗಳನ್ನು ನೀಡಬೇಕೆಂದು ಎಲ್.ನಾರಾಯಣಾಚಾರ್ ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss