ಬೆಳಗಾವಿ : ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಮಸೂದೆಗಳು ಕೃಷಿಕರ ಪರವಾಗಿದ್ದು ವಿರೋಧ ಪಕ್ಷಗಳು ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ವಿರೋಧ ಪಕ್ಷಗಳ ರಾಜಕೀಯಕ್ಕೆ ರೈತರು ಬಲಿಯಾಗಬಾರದು ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು.
ಅವರು ಭಾನುವಾರ ನಗರದ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂ ಸುಧಾರಣೆ ಕಾಯ್ದೆಯಲ್ಲಿ 79 ಎ, 79 ಬಿ ಮತ್ತು 80 ರ ತಿದ್ದುಪಡಿಯನ್ನು ಕೃಷಿಯೆತರ ಭೂಮಿ ಖರೀದಿಯಲ್ಲಿ ಯಾವುದೇ ಅಡಚಣೆ ಆಗದಂತೆ ತಡೆಯುವುದಾಗಿದೆ. ಜೊತೆಗೆ ಉದ್ಯೋಗ ಸೃಷ್ಟಿಸಲು ಕಾರಣವಾಗಿದೆ ಎಂದರು.
ಭೂ ಸುಧಾರಣೆ ತಂದರೆ ರಪ್ತು ಹೆಚ್ಚಳವಾಗಿ ರಾಜ್ಯಕ್ಕೆ ಲಾಭವಾಗಲಿದೆ. ಜೊತೆಗೆ ಕೃಷಿ ಮಾಡಬಯಸುವ ಹೊಸಬರಿಗೆ ಸಹಕಾರಿವಾಗಲಿದೆ. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆಯಿಂದ ಕೃಷಿ ಉತ್ಪಾದನೆ ಅಥವಾ ಪಾಲನೆಗಾಗಿ ರೈತ ಖರೀದಿದಾರರ ಮಧ್ಯೆ ನೇರವಾದ ಒಪ್ಪಂದ ಮಾಡಿಕೊಳ್ಳಬಹುದು. ಇದರಿಂದ ರೈತರಿಗಾಗುವ ಅಪಾಯ ತಪ್ಪುತ್ತದೆ ಎಂದು ಹೇಳಿದರು.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಮಸೂದೆಯಿಂದ ಕೃಷಿ ಮಾರುಕಟ್ಟೆ ಹೊರಗೆ ಹೆಚ್ಚುವರಿ ವ್ಯಾಪಾರ ಕಲ್ಪಿಸಬಹುದಾಗಿದೆ. ಜೊತೆಗೆ ಎಪಿಎಂಸಿ ಮಾರುಕಟ್ಟೆ ಕಾನೂನು ವ್ಯಾಪ್ತಿ ಮೀರಿ ರೈತರು ಅಂತರ ರಾಜ್ಯ ಕೃಷಿ ವ್ಯಾಪಾರ ಮಾಡುವ ಅವಕಾಶ ದೊರೆಯುತ್ತದೆ. ಜೊತೆಗೆ ಅಗತ್ಯ ಸರಕು ತಿದ್ದುಪಡಿಯಿಂದ ಕೆಲವು ಸರಕುಗಳ ವ್ಯಾಪಾರ ಉತ್ಪಾದನೆ ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ಅವಕಾಶ ದೊರೆಯಲಿದ್ದು ಮಧ್ಯವರ್ತಿಗಳ ಹಾಗೂ ನಿಯಂತ್ರಕರ ಹಾವಳಿ ತಡೆದು ರೈತರ ಬೆಳೆಗಳಿಗೆ ಲಾಭ ನೀಡುವ ಉದ್ದೇಶ ಹೊಂದಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಶಾಸಕ ಸಂಜಯ್ ಪಾಟೀಲ, ಹನುಮಂತ ಕೊಂಗಾಳಿ, ರಾಜು ಚಿಕ್ಕನ್ನಗೌಡರ, ಸೇರಿದಂತೆ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.