ಹೊಸ ದಿಗಂತ ವರದಿ, ಚಿಕ್ಕಮಗಳೂರು:
ವಿವಿಧ ಪ್ರಕರಣಗಳಲ್ಲಿ ಕರ್ತವ್ಯ ಲೋಪವೆಸಗಿದ ಓರ್ವ ಪಿಎಸ್ಐ ಸೇರಿ 11 ಮಂದಿ ಸಿಬ್ಬಂದಿಗಳು ಅಮಾನತುಗೊಂಡಿದ್ದಾರೆ.
ಮಲ್ಲೇನಹಳ್ಳಿ ಮೂಲದ ವ್ಯಕ್ತಿಯೊಬ್ಬನನ್ನು ಪ್ರಕರಣವೊಂದರ ಹೆಸರಿನಲ್ಲಿ ಠಾಣೆಗೆ ಕರೆತಂದು ಸುಮಾರು 3.40 ಲಕ್ಷ ರೂ. ಹಣ ವಸೂಲಿ ಮಾಡಿದ್ದರೆನ್ನುವ ಆರೋಪ ಪ್ರಾಥಮಿಕ ತನಿಖೆಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಬಸವನಹಳ್ಳಿ ಪಿಎಸ್ಐ ಸುತೇಶ್, ಪೋಲೀಸ್ ಪೇದೆಗಳಾದ ಲಕ್ಷ್ಮಣ, ಯುವರಾಜ, ಪ್ರದೀಪ ಎಂಬುವವರನ್ನು ಅಮಾನತ್ತಿನಲ್ಲಿಟ್ಟು ಇಲಾಖಾ ವಿಚಾರಣೆಗೆ ಒಳಪಡಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಆಲ್ದರೂ ಠಾಣೆ ವ್ಯಾಪ್ತಿಯ ಹೋಂಸ್ಟೇ ಮಾಲೀಕರೊಬ್ಬರನ್ನು ಹೆದರಿಸಿ ಹಣ ವಸೂಲಿ ಮಾಡಿದ್ದಾರೆ ಎನ್ನುವ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆಲ್ದೂರು ಠಾಣೆ ಪೇದೆಗಳಾದ ಸ್ವಾಮಿ, ಶಶಿಕುಮಾರ್, ಅರುಣ್ ಕುಮಾರ್, ಚಾಲಕ ನವೀನ್ ಕರ್ತವ್ಯಲೋಪದಡಿಯಲ್ಲಿ ಅಮಾನತುಗೊಂಡಿದ್ದಾರೆ.
ಶೃಂಗೇರಿಯ ಪೋಲಿಸ್ ಠಾಣೆಯ ನಾಗಪ್ಪ ತುಕ್ಕಣನವರ ಎಂಬ ಪೋಲಿಸ್ ಪೇದೆ ಇತ್ತಿಚೆಗೆ ಬೆಂಗಳೂರಿನಲ್ಲಿ ನಡೆದ ಪೋಲಿಸ್ ನೇಮಕಾತಿ ಪರೀಕ್ಷೆಯಲ್ಲಿ ಬೇರೊಬ್ಬ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆದು ಕೇಂಗೇರಿ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಕೈಮರ ತನಿಖಾ ಠಾಣೆ ಹಾಗೂ ಹಾಲೇನಹಳ್ಳಿ ತನಿಖಾ ಠಾಣಗಳಿಗೆ ನಿಯೋಜನೆಗೊಂಡಿದ್ದ ಪೇದೆಗಳಾದ ರಾಜಾನಾಯ್ಕ ಮತ್ತು ಮಂಗಲ್ ದಾಸ್ ಇಬ್ಬರು ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ.