Wednesday, August 10, 2022

Latest Posts

ವಿವಿಧ ರಾಜ್ಯಗಳ ವಿಭಿನ್ನ ನಿಲುವು: ವಿಮಾನ ಪ್ರಯಾಣಿಕರಿಗೆ ಕ್ವಾರಂಟೈನ್ ಬೇಕೇ ಬೇಡವೇ ?

ಬೆಂಗಳೂರು : ಅಂತರ್‌ದೇಶಿಯವಾಗಿ ವಿಮಾನಗಳ ಹಾರಾಟಕ್ಕೆ ಕ್ಷಣಗಣನೆ ಶುರುವಾಗಿದ್ದು ವಿವಿಧ ರಾಜ್ಯಗಳು ವಿಭಿನ್ನ ನಿಲುವು ತಾಳಿವೆ.
ಕೊರೋನಾ ಸೋಂಕು ಅಧಿಕ ಸಂಖ್ಯೆಯಲ್ಲಿ ದಾಖಲಾದ ಮಹಾರಾಷ್ಟ್ರ ಹಾಗೂ ತಮಿಳುನಾಡು ಸದ್ಯ ವಿಮಾನಗಳ ಹಾರಾಟವೇ ಬೇಡ ಎಂದು ಕೇಂದ್ರಕ್ಕೆ ಮೊರೆಯಿಟ್ಟಿದ್ದರೆ, ತೆಲಂಗಾಣ, ಆಂಧ್ರ ಮತ್ತು ಕೇರಳ ಪ್ರಯಾಣಿಕರನ್ನು ಕನಿಷ್ಠ ಒಂದಷ್ಟು ದಿನ ಕ್ವಾರಂಟೈನ್‌ನಲ್ಲಿಡದೆ ಪ್ರಯಾಣಿಕರನ್ನು ಅವರವರ ನಿವಾಸಗಳಿಗೆ ತೆರಳಲು ಅನುಮತಿ ನೀಡುವುದು ಅಸಾಧ್ಯ ಎಂದು ಸ್ಪಷ್ಟಪಡಿಸಿದೆ. ಶನಿವಾರವಷ್ಟೆ ನಾಗರಿಕ ವಿಮಾನಯಾನ ಮಂತ್ರಿ ಹರದೀಪ್‌ಸಿಂಗ್ ಪುರಿ, ರಾಜ್ಯಗಳ ನಡುವೆ ವಿಮಾನ ಹಾರಾಟವಾಗಲಿದೆ ಎಂದಿದ್ದಾರೆ.
ಮಹಾ, ತಮಿಳುನಾಡು ಆತಂಕ
ಮುಂಬಯಿ, ನಾಗಪುರ ಹಾಗೂ ಪುಣೆ ನಗರಗಳು ಈಗಲೂ ರೆಡ್‌ಜೋನ್ ಪಟ್ಟಿಯಲ್ಲಿದ್ದು ಈ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಂದಿಳಿಯುವುದೇ ಸುರಕ್ಷಿತವಲ್ಲ. ಇದನ್ನು ನಾಗರಿಕ ವಿಮಾನಯಾನ ಇಲಾಖೆ ಗಂಭೀರವಾಗಿ ಪರಿಗಣಿಸಬೇಕೆಂದು ಮಹಾರಾಷ್ಟ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಕೂಡಾ ತಮಿಳುನಾಡಿನಲ್ಲಿ ಕೊರೋನಾ ಇನ್ನೂ ತಹಬಂದಿಗೆ ಬಾರದ ಕಾರಣ ಚೆನ್ನೈ ಸೇರಿದಂತೆ ತಮಿಳುನಾಡಿನ ಪ್ರಮುಖ ನಗರಗಳಿಗೆ ವಿಮಾನ ಸಂಪರ್ಕ ಬೇಡ ಎಂದು ಮೊರೆಯಿಟ್ಟಿದ್ದಾರೆ.
2 ದಿನವಾದರೂ ಕ್ವಾರಂಟೈನ್‌ನಲ್ಲಿಡಿ
ಇನ್ನು ಕರ್ನಾಟಕ , ಅಸ್ಸಾಂ, ಗುಜರಾತ್ ರಾಜ್ಯಗಳು ಬೆಂಗಳೂರು, ಗಾಂಧಿನಗರ್, ಗುವಾಹತಿ ನಗರಗಳ ನಡುವೆ ವಿಮಾನ ಹಾರಾಟಕ್ಕೆ ತನ್ನ ಅಡ್ಡಿಯಿಲ್ಲವೆಂದರೂ ಪ್ರಯಾಣಿಕರನ್ನು ಕನಿಷ್ಠ ಎರಡು ದಿನಗಳ ಮಟ್ಟಿಗೆ ಪ್ರತ್ಯೇಕ ಕ್ವಾರಂಟೈನ್‌ನಲ್ಲಿಡಲು ಈ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಆದರೆ ಸಚಿವ ವಿಮಾನದಲ್ಲಿ ಪ್ರಯಾಣಿಸುವ ಆರೋಗ್ಯ ಸೇತು ಆಪ್‌ನಲ್ಲಿ ಹಸಿರು ನಿಶಾನೆ ಕಂಡು ಬಂದಲ್ಲಿ ಕ್ವಾರಂಟೈನ್ ಅಗತ್ಯವೇ ಇಲ್ಲ ಎಂದು ನಿನ್ನೆಯಷ್ಟೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss