Thursday, July 7, 2022

Latest Posts

ವಿಶೇಷ ಚೇತನರು ದೇವರ ಮಕ್ಕಳು, ಅವರ ಸಾಧನೆಯಿಂದ ಎಲ್ಲರೂ ಕಲಿಯಬೇಕು: ಬೊಮ್ಮಾಯಿ

ದಿಗಂತ ವರದಿ ಉಡುಪಿ:

ಅಂಗವಿಕಲತೆ ಎಂದರೆ ಅಂಗಾಂಗಗಳಲ್ಲಿನ ಕೊರತೆ ಎಂಬುದು ಸರಕಾರಿ ವ್ಯಾಖ್ಯಾನ, ಆದರೆ ಅವರ ಸಾಧನೆಯನ್ನು ನೋಡಿದರೆ ಇದು ಅವಕಾಶಗಳ ಕೊರತೆ ಎಂಬುವುದು ತಿಳಿಯುತ್ತಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಗುರುವಾರ ಅಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಹಿರಿಯನಾಗರಿಕರು ಮತ್ತು ಅಂಗವಿಲಕರ ಇಲಾಖೆಯು ವಿವಿಧ ಇಲಾಖೆಗಳು ಹಾಗೂ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು‌.
ವಿಶೇಷ ಚೇತನರು ದೇವರ ಮಕ್ಕಳು. ಈ ಮಕ್ಕಳಲ್ಲಿ ದೇವರು ಕೊರತೆ ಇಟ್ಟು, ಉತ್ತಮವಾದ ಸಾಧನೆ ಮಾಡುವ ಶಕ್ತಿಯನ್ನು ತುಂಬಿ, ಜಗತ್ತಿಗೆ ಆತನ ಶಕ್ತಿಯ ಮಿತಿಯನ್ನು ತೋರಿಸಿದ್ದಾನೆ. ಜಗತ್ತನ್ನು ನೋಡಬೇಕಾದರೆ, ಸೃಷ್ಟಿಕರ್ತನನ್ನು ನೋಡಲು ದೇವರ ಮಕ್ಕಳ ಮೂಲಕ ಮಾತ್ರ ಸಾಧ್ಯ. ಆ ಮಕ್ಕಳನ್ನು ಸಾಕು, ಸಲಹುವವರು ದೇವರ ಕೃಪೆಗೆ ಪಾತ್ರರಾಗುತ್ತಾರೆ ಎಂದು ಹೇಳಿದರು.
ನ್ಯಾಯ ಶೀಘ್ರವಾಗಿ ಮತ್ತು ಸುಲಭವಾಗಿ ಸಿಗಲಿ ಎನ್ನುವ ಕಾರಣಕ್ಕೆ ಕಾನೂನು ಅಳವಡಿಸಲಾಗಿದೆ. ನಾವು ಕರುಣೆಯನ್ನು ಸಮಾಜದ ಮೇಲೆ ಹೇಗೆ ತೋರಿಸುತ್ತೇವೋ ಅದರ ಆಧಾರದ ಮೇಲೆ ಸದೃಢ ಸಮಾಜ ನಿರ್ಮಾಣವಾಗುತ್ತದೆ. ಅಂಗವಿಕಲರ ಅಸಮಾನತೆಯ ವಿರುದ್ಧದ ಹೋರಾಟಕ್ಕೆ ಮಾನವೀಯತೆಯ ಅಸ್ತ್ರ ಬಳಸಬೇಕು. ಕಾನೂನಿಗೆ ಮೀರಿ ಮಾನವೀಯತೆ ಇರುವುದು, ನಾವೆಲ್ಲರೂ ಆ ಮಾನವೀಯತೆಯನ್ನು ಮೆರೆಯಬೇಕು ಎಂದರು.
ಮುಂದಿನ ದಿನಗಳಲ್ಲಿ ಸರಕಾರ ಅತೀ ಹೆಚ್ಚಿನ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಡಲಿದೆ. ಅಂಗವಿಕಲರ ಅಭಿವೃದ್ಧಿ ಪ್ರಥಮ ಪ್ರಾಶಸ್ತ್ಯದಲ್ಲಿ ಮಾಡುತ್ತೇವೆ ಎಂದ ಸಚಿವರು, ತಮ್ಮ ಉಸ್ತುವಾರಿ ಇರುವ ಉಡುಪಿ ಜಿಲ್ಲೆಗೂ ತಮ್ಮ ಶ್ರೀಮತಿ ಗಂಗಮ್ಮ ಸೋಮಪ್ಪ ಟ್ರಸ್ಟ್ ಟ್ರಸ್ಟ್ ವತಿಯಿಂದ ಅಂಗವಿಕಲರಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತದೆ ಎಂದು ಘೋಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಘುಪತಿ ಭಟ್ ವಹಿಸಿದ್ದರು‌. ಜಿ.ಪಂ.ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಶಾಸಕ ಲಾಲಾಜಿ ಮೆಂಡನ್, ಕರಾವಳಿ‌ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ‌ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಕಾನೂನು ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕಾವೇರಿ, ಜಿ.ಪಂ. ಸಿಇಒ ಡಾ. ನವೀನ್‌ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss