Thursday, August 11, 2022

Latest Posts

ವಿಶ್ವದ ದೊಡ್ಡಣ್ಣ ಜೋ ಬೈಡೆನ್‌ಗಿದೆ ಭಾರತದ ನಾಗಪುರ ‘ಸಂಬಂಧ’ಗಳ ನಂಟು!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ವಿಶ್ವದ ದೊಡ್ಡಣ್ಣ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ನಂಟಿರುವ ಸಂಗತಿ ಸಂತಸ ಕೊಟ್ಟಿರುವ ಬೆನ್ನಿಗೇ ಅಧ್ಯಕ್ಷ ಜೋ ಬೈಡನ್‌ಗೂ ಭಾರತದ ನಾಗಪುರಕ್ಕೂ ಅತ್ಯಂತ ಹತ್ತಿರದ ನಂಟಿದೆ ಎಂಬುದು ಬೆಳಕಿಗೆ ಬಂದಿದೆ.
ಹೌದು. ಜೋ ಬೈಡನ್ ಅವರ ದೂರದ ಸಂಬಂಧಿಕರು ಭಾರತದಲ್ಲಿ ನೆಲೆಸಿದ್ದಾರೆ. ಈ ಬಗ್ಗೆ ಖುದ್ದು ಬೈಡನ್ 2013, 2015ರಲ್ಲಿ ಪ್ರಸ್ತಾಪಿಸಿದ್ದರು. 1972ರಲ್ಲಿ ತಾವು ಸೆನೆಟರ್ ಆದಾಗ ಭಾರತದಿಂದ ಪತ್ರವೊಂದು ಬಂದಿತ್ತು. ಇದರಿಂದಾಗಿ ತಮ್ಮ ‘ದೊ………….ಡ್ಡಜ್ಜ’ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿತ್ತು ಎಂದು ಅವರು ಹೇಳಿದ್ದರು. ಅಂದ ಹಾಗೆ ಈ ಪತ್ರವನ್ನು ನಾಗಪುರ ಮೂಲದ ನಿವಾಸಿ ಲೆಸ್ಲೀ ಬೈಡನ್ ಅವರು ಬರೆದಿದ್ದರು.
ಲೆಸ್ಲೀ ಬೈಡನ್ ಭಾರತ್ ಲಾಡ್ಜ್ ಮತ್ತು ಹಾಸ್ಟೆಲ್, ಭಾರತ್ ಕೆಫೆಯ ಮ್ಯಾನೇಜರ್ ಆಗಿದ್ದರು. 1983 ರಲ್ಲಿ ಅವರು ಮೃತಪಟ್ಟಿದ್ದರು. ಇದಕ್ಕೂ ಮುನ್ನ 1981ರ ಏ. 15ರಂದು ಪತ್ರ ರವಾನಿಸುವ ಮೂಲಕ ಲೆಸ್ಲೀ , ಜೋ ಬೈಡನ್ ಜೊತೆ ಸಂಪರ್ಕ ಪಡೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ 1981ರ ಮೇ 30ರಂದು ಜೋ ಬೈಡನ್, ಲೆಸ್ಲೀ ಅವರಿಗೆ ಪತ್ರ ಮೂಲಕ ಪ್ರತಿಕ್ರಿಯೆ ಕೂಡಾ ನೀಡಿದ್ದರು. ಅಲ್ಲದೆ ಭಾರತದಿಂದ ಪತ್ರ ಬಂದಿದ್ದರ ಬಗ್ಗೆ ಸಂತಸ ಹಂಚಿಕೊಂಡಿದ್ದ ಅವರು, ಬೈಡನ್ಸ್ ವಂಶಾವಳಿ ಬಗ್ಗೆ ಚರ್ಚಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ ಲೆಸ್ಲೀ ಅವರ ಮೊಮ್ಮಗಳು ಸೋನಿಯಾ.
ಲೆಸ್ಲೀ ಅವರ ಮೊಮ್ಮಗಳು ಸೋನಿಯಾ ಬೈಡನ್ ಫ್ರಾನ್ಸಿಸ್ ನಾಗಪುರದಲ್ಲಿ ಮನೋವೈದ್ಯೆಯಾಗಿದ್ದಾರೆ. ಈಗ ಅಲ್ಲ, ಇವರು 1873ರಿಂದಲೂ ಮಹಾರಾಷ್ಟ್ರದ ನಾಗಪುರ ನಗರದಲ್ಲಿ ನೆಲೆಸಿದ್ದಾರೆ.
ಸೋನಿಯಾ ಅವರ ಅಣ್ಣ ಇಯಾನ್ ಬೈಡನ್ ವ್ಯಾಪಾರಿ ಹಡಗೊಂದರಲ್ಲಿ ನಾವಿಕರಾಗಿದ್ದು, ಅವರು ಕೂಡ ನಾಗಪುರದಲ್ಲಿ ನೆಲೆಸಿದ್ದಾರೆ.  ಲೆಸ್ಲೀ ಮತ್ತು ಜೋ ಬೈಡನ್ ಅವರು ಪತ್ರ ವ್ಯವಹಾರ ನಡೆಸಿದ್ದಕ್ಕೆ ಪರಸ್ಪರ ಕೃತಜ್ಞತೆ ಸಲ್ಲಿಸಿದ್ದರು. ಹಾಗೆಯೇ ಸಂಪರ್ಕ ಮುಂದುವರಿಸುವುದಾಗಿ ಹೇಳಿಕೊಂಡಿದ್ದರು. ನಂತರ ಯಾವುದೇ ಸಂವಹನ ನಡೆದಿಲ್ಲ ಎಂದಿದ್ದಾರೆ ಅವರು.
ನನ್ನ ದೊಡ್ಡ ದೊಡ್ಡ ದೊಡ್ಡ ದೊಡ್ಡ ದೊಡ್ಡಜ್ಜ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕ್ಯಾಪ್ಟನ್ ಆಗಿದ್ದರು. ಅಲ್ಲಿ ನಿವೃತ್ತಿಯಾದ ಬಳಿಕ ಭಾರತದಲ್ಲಿಯೇ ನೆಲೆಸಲು ನಿರ್ಧರಿಸಿದ್ದ ಅವರು ಭಾರತೀಯ ಮಹಿಳೆಯನ್ನು ಮದುವೆಯಾಗಿದ್ದರು. ಈಗ ಮುಂಬೈನಲ್ಲಿ ಐವರು ಬೈಡನ್‌ಗಳಿದ್ದಾರೆ. ಯಾರೋ ನನಗೆ ಅವರ ದೂರವಾಣಿ ಸಂಖ್ಯೆ ಕೊಟ್ಟಿದ್ದಾರೆ. ಆದರೆ ನಾನು ಅವರಿಗೆ ಇನ್ನೂ ಕರೆ ಮಾಡಿಲ್ಲ. ಆದರೆ ಮಾಡುವ ಆಲೋಚನೆಯಿದೆ ಎಂದು 2015 ರಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೋ ಬೈಡನ್ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss