ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವೇಳೆಯಲ್ಲಿ ಮಹಿಷ ದಸರಾ ಆಚರಿಸಲು ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಬಿಜೆಪಿ ಎಸ್ಸಿ ಮೋರ್ಚಾ ಆಗ್ರಹಿಸಿದೆ.
ಮಂಗಳವಾರ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿ.ಸೋಮಸುಂದರ್, ಮೈಸೂರು ದಸರಾ ಸಾಂಸ್ಕತಿಕ ಹಿರಿಮೆ- ಗರಿಮೆಯನ್ನು ವಿಶ್ವಕ್ಕೆ ಸಾರಿರುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಈ ಸಂದರ್ಭದಲ್ಲಿ ರಾಕ್ಷಸ ಗಣವನ್ನು ಪೂಜಿಸುವ ಮಹಿಷ ದಸರಾ ಆಚರಣೆ ಮಾಡುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಭಾರತೀಯ ಸಂಸ್ಕತಿಯಲ್ಲಿ ದೈವೀ ಶಕ್ತಿಯನ್ನು ಪೂಜಿಸುತ್ತೇವೆಯೇ ಹೊರತು ಹಿಂಸೆಯ ಪ್ರತಿರೂಪವಾದ ಮಹಿಷ,ರಾವಣ,ಶೂರ್ಪನಕಿ ಮುಂತಾದ ರಾಕ್ಷಸ ಗಣವನ್ನು ಪೂಜಿಸುವ ಪರಿಪಾಠ ನಮ್ಮಲ್ಲಿ ಬೆಳೆದು ಬಂದಿಲ್ಲ ಎಂದರು.
ಮಹಿಷ ದಸರಾ ಆಚರಣೆಗೆ ದಲಿತ ಸಮುದಾಯವನ್ನು ಎಳೆದು ತರುವುದು ಸಮಂಜಸವಲ್ಲ . ಹಳೇ ಮೈಸೂರು ಭಾಗದಲ್ಲಿ ಯಾವುದೇ ದಲಿತ ಕೇರಿಗೆ ಹೋದರೂ ಚಾಮುಂಡೇಶ್ವರಿ ತಾಯಿಯ ದೇವಾಲಯವಿರುವುದು ಕಂಡು ಬರುತ್ತದೆ. ಪ್ರತಿಯೊಬ್ಬ ದಲಿತರ ಮನೆಗಳಲ್ಲಿ ಮಹಿಷಾಸುರನನ್ನು ವಧೆ ಮಾಡುತ್ತಿರುವ ಚಾಮುಂಡೇಶ್ವರಿಯ ಫೋಟೋಗೆ ಪೂಜಿಸುವುದನ್ನು ಕಾಣುತ್ತೇವೆ. ಹೀಗಿರುವಾಗ ದಲಿತ ಸಮುದಾಯವನ್ನು ದಸರಾ ಆಚರಣೆಗೆ ವಿರೋಧವಿದೆ ಎಂಬ ರೀತಿಯಲ್ಲಿ ಭಾವನೆ ಮೂಡಿಸುವ ಪ್ರಯತ್ನ ಮಾಡುತ್ತಿರುವುದು ತೀವ್ರ ಖಂಡನೀಯ ಎಂದರು.
ಹಿಂಸೆಯ ಪ್ರತಿರೂಪವಾದ ಮಹಿಷನನ್ನು ಆರಾಧಿಸುವುದು ಖಂಡನೀಯ.ಅಲ್ಲದೇ ಈ ಸಂಬoಧ ಡಾ.ಪ್ರೊ.ಮಹೇಶ್ ಚಂದ್ರ ಗುರು ತಮ್ಮ ನಾಮಧೇಯದ ಬಗ್ಗೆ ನೀಡಿರುವ ಸೃಷ್ಟೀಕರಣ ಹಾಸ್ಯಾಸ್ಪದವಾಗಿದೆ ಎಂದು ಕಿಡಿಕಾರಿದರು. 60 ವರ್ಷಗಳವರೆಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಪ್ರೊ.ಮಹೇಶ್ ಚಂದ್ರಗುರುರಿಗೆ ಸಾಮಾನ್ಯ ಕನಿಷ್ಠ ಜ್ಞಾನವೂ ಇಲ್ಲದಿರುವಂತೆ ವರ್ತಿಸುವುದು ಇವರ ಘನತೆಗೆ ಶೋಭೆ ತರುವಂತದಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಎಸ್.ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ನರಸಿoಹ ಮೂರ್ತಿ,ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಧೀರಜ್ ಪ್ರಸಾದ್, ನರಸಿಂಹ ಮೂರ್ತಿ, ಜಯರಾಂ ಉಪಸ್ಥಿತರಿದ್ದರು.