Wednesday, July 6, 2022

Latest Posts

ವಿಶ್ವ ಹಿಂದೂ ಪರಿಷದ್- ಬಜರಂಗದಳದಿಂದ ಕೋವಿಡ್ ಸೋಂಕಿತ 25 ವ್ಯಕ್ತಿಗಳ ಅಂತ್ಯ ಸಂಸ್ಕಾರ

ಮಡಿಕೇರಿ: ಕೊಡಗು ಜಿಲ್ಲಾ ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳದ ಕೊರೋನಾ ವಾರಿಯರ್ಸ್ ತಂಡ ಇದುವರೆಗೆ 25 ಸೋಂಕಿತ ವ್ಯಕ್ತಿಗಳ ಅಂತ್ಯ ಸಂಸ್ಕಾರ ನಡೆಸುವ ಮೂಲಕ ದಾಖಲೆ ಸೃಷ್ಟಿಸಿದೆ.
ಕಳೆದ (2019) ಸಾಲಿನ ಕೊನೆಯಲ್ಲಿ ಹರಡಲಾರಂಬಿಸಿದ ಚೀನಾ ಮೂಲದ ಮಾರಕ ಖಾಯಿಲೆ ಹೆಮ್ಮಾರಿಯಾಗಿ ಪಸರಿಸಿದ ವಿಶ್ವದಾದ್ಯಂತ ಸರಿಸುಮಾರು 1 ಮಿಲಿಯನ್ (ಹತ್ತು ಲಕ್ಷ)ಕ್ಕೂ ಹೆಚ್ಚಿನ ಬಲಿ ಪಡೆದುಕೊಂಡಿದೆ. ಮಾರ್ಚ್ ತಿಂಗಳಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಮೊದಲ ಸಾವಿನೊಂದಿಗೆ ಭಾರತದಲ್ಲಿ ತನ್ನ ಕಬಂಧಬಾಹು ಚಾಚಿದ ಕೋವಿಡ್-19 ಸುಮಾರು 1 ಲಕ್ಷಕ್ಕೂ ಅಧಿಕ ಜೀವ ಬಲಿ ಪಡೆದಿದೆ.
ಲಾಕ್‍ಡೌನ್- ಸೀಲ್‍ಡೌನ್ ನಂತರ ಜನಜೀವನ ಸಾಮಾನ್ಯ ಶೈಲಿಯಲ್ಲಿ ಮುಂದುವರಿಯಲಾರಂಭಿಸಿದಂತೆ ಕೊರೋನಾ ಸೋಂಕಿನಿಂದ ಸಾವಿಗೀಡಾಗುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.
ಹೀಗೆ ದಾಖಲಾದ ಮರಣ ಪ್ರಕರಣಗಳಲ್ಲಿ ಮೊದ ಮೊದಲು ಕೆಲವು ಕಡೆ ನಡೆದ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಇಡೀ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿತ್ತು. ಆದರೆ ಆ ಸಂದರ್ಭದಲ್ಲಿ ಕೊಡಗು ಜಿಲ್ಲೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ಆದರೂ ಈಗ ಕೊಡಗಿನಲ್ಲಿ ಸುಮಾರು 53 ಮರಣ ಪ್ರಕರಣಗಳು ವರದಿಯಾಗಿವೆ.
ರಾಜ್ಯಕ್ಕೆ ಮಾದರಿಯಾದ ಕೊಡಗು: ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ಮೃತ ದೇಹವನ್ನು ಮೃತರ ಕುಟುಂಬಕ್ಕೆ ನೀಡದ ಸಂದರ್ಭದಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿ ಕೊಡಗು ಜಿಲ್ಲೆಯ ವಿಶ್ವ ಹಿಂದೂ ಪರಿಷದ್ -ಬಜರಂಗದಳ ಮೃತರ ಅಂತ್ಯ ಸಂಸ್ಕಾರದಲ್ಲಿ ಕೈಜೋಡಿಸಲು ತೀರ್ಮಾನ ತೆಗೆದುಕೊಂಡಿತ್ತು.
ಇದೇ ಸಂದರ್ಭ ಜಿಲ್ಲಾಡಳಿತ ಕೂಡ ಸ್ವಯಂಸೇವಕರನ್ನು ಬಯಸಿದ್ದರಿಂದ ಇದನ್ನು ಸ್ವಾಗತಿಸಿ ಇದಕ್ಕಾಗಿ ತರಬೇತಿ ಏರ್ಪಡಿಸಲು ಕಾರ್ಯಪ್ರವೃತ್ತವಾಯಿತು. ಆದರೆ ತರಬೇತಿಗೂ ಮೊದಲೇ ಶಂಕಿತ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಬೇಕಾದ ಅನಿವಾರ್ಯತೆ ಎದುರಾದಾಗ ಧೃತಿಗೆಡದ ಬಜರಂಗದಳ ಕಾರ್ಯಕರ್ತರು ಜಿಲ್ಲಾ ಸಂಯೋಜಕರ ನೇತೃತ್ವದಲ್ಲಿ ಅಗ್ನಿ ಸ್ಪರ್ಶ ನೀಡುವ ಮೂಲಕ ಅಂತ್ಯಕ್ರಿಯೆ ನಡೆಸಿದರು.
ನಂತರ ಸುಮಾರು 45 ಮಂದಿ ಸ್ವಯಂ ಸೇವಕರ ನೋಂದಣಿಯೊಂದಿಗೆ ತರಬೇತಿ ಪಡೆದ ಕಾರ್ಯಕರ್ತರು ವಿಶ್ವ ಹಿಂದೂ ಪರಿಷದ್ ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ ಹಾಗೂ ಬಜರಂಗದಳದ ಜಿಲ್ಲಾ ಸಂಯೋಜಕ ಚೇತನ್ ನೇತೃತ್ವದಲ್ಲಿ 25 ಕೋವಿಡ್ ಸೋಂಕಿತ ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ಇದುವರೆಗೆ ನಡೆಸಲಾಗಿದೆ.
ಮೊದ ಮೊದಲು 3-4 ಅಂತ್ಯ ಸಂಸ್ಕಾರಕ್ಕಾಗಿ ಜಿಲ್ಲಾಡಳಿತ ಕ್ಯಾಮೆರಾ ಮೆನ್, ಪೊಲೀಸ್, ನಗರ ಸಭೆ ಸಿಬ್ಬಂದಿಗಳ ವ್ಯವಸ್ಥೆ ಮಾಡಿತ್ತು. ಆ ನಂತರದ ದಿನಗಳಲ್ಲಿ ಸ್ವಯಂ ಸೇವಕರೇ ಕಿಟ್ ಧÀರಿಸಿ ಡೀಸೆಲ್ ತಂದ ಉದಾಹರಣೆಗಳಿವೆ. ಅರಣ್ಯ ಇಲಾಖೆಯ ವತಿಯಿಂದ ಮೊದಲು ಸೌದೆ ವ್ಯವಸ್ಥೆ ಮಾಡಿತ್ತು. ಆದರೆ ನಂತರದ ದಿನಗಳಲ್ಲಿ ದಾನಿಗಳ ನೆರವಿನಿಂದ ಸೌದೆ ಹೊಂದಿಸುವ ಕಾರ್ಯವನ್ನೂ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾಡಿಕೊಂಡಿದೆ.
ಏಕ ಕಾಲಕ್ಕೆ ಎರಡೆರಡು ಮರಣ ಪ್ರಕರಣ ಎದುರಿಸಿದ ಕಾರ್ಯಕರ್ತರು ಮುಂದೆ ವಿಶ್ವ ಹಿಂದೂ ಪರಿಷದ್ ತಾಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ ಹಾಗೂ ಬಜರಂಗದಳದ ಜಿಲ್ಲಾ ಸಂಯೋಜಕ ಚೇತನ್ ನೇತೃತ್ವದಲ್ಲಿ ಎರಡನೆಯ ಕಬ್ಬಿಣದ ಚಿತೆಯನ್ನು ಕೂಡಾ ಮಾಡಿಕೊಂಡಿದ್ದಾರೆ.
ಇದುವರೆಗೆ ಬಜರಂಗದಳ ನೇತೃತ್ವದಲ್ಲಿ ನಡೆದ ಅಂತ್ಯ ಸಂಸ್ಕಾರವನ್ನು ಅಗ್ನಿ ಸ್ಪರ್ಶದ ಮೂಲಕವೇ ನಡೆಸಿರುವುದು ಮತ್ತೊಂದು ವಿಶೇಷ.
ಸಂಬಂಧಿಗಳೇ ಮೃತ ವ್ಯಕ್ತಿಯ ಹತ್ತಿರ ಹೋಗದ ಈ ಸಂದರ್ಭದಲ್ಲಿ ‘ವಸುದೈವ ಕುಟುಂಬಕಂ’ ಸಿದ್ಧಾಂತದಡಿ ಶನಿವಾರದವರೆಗೆ 25 ಅಂತ್ಯಕ್ರಿಯೆಯನ್ನು ನಡೆಸಿದ ಕೊಡಗು ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಬಜರಂಗದಳ ಇದನ್ನು ಸೇವೆಯಾಗಿ ಸ್ವೀಕರಿಸಿದೆ. ಸೇವಾ ಕಾರ್ಯದಲ್ಲಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss