ವೀರಾಜಪೇಟೆ: ಪಟ್ಟಣದ ಜೈನರ ಬೀದಿಯಲ್ಲಿರುವ ಅಂಗಡಿಯೊಂದರಲ್ಲಿ ವಿದ್ಯುತ್ ಅವಘಡದಿಂದ ಬೆಂಕಿ ಕಾಣಿಸಿಕೊಂಡು ಬಹುತೇಕ ದಿನಸಿ ಪದಾರ್ಥಗಳು ಸುಟ್ಟು ಕರಗಲಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ವೀರಾಜಪೇಟೆ ಜೈನರ ಬೀದಿಯಲ್ಲಿರುವ ಚಂದ್ರ ಪ್ರಸಾದ್ ಅವರಿಗೆ ಸೇರಿದ ಕಟ್ಟಡದಲ್ಲಿರುವ ಕರ್ನಾಟಕ ಬ್ಯಾಂಕ್ ಕಟ್ಟಡದ ಕೆಳಭಾಗದಲ್ಲಿ ಎಂ.ಪಿ.ಸತೀಶ್ ಎಂಬವರು ಅಯ್ಯಪ್ಪ ಎಂಟರ್ಪ್ರೈಸಸ್ ಎಂಬ ದಿನಸಿ ಮತ್ತು ದಿನೋಪಯೋಗಿ ವಸ್ತುಗಳ ಸಗಟು ವ್ಯಾಪಾರ ನಡೆಸುತ್ತಿದ್ದು, ಲಾಕ್ಡೌನ್ ಇದ್ದ ದಿನನಿತ್ಯದಂತೆ ಬುಧವಾರ ಸಂಜೆ ೭ ಗಂಟೆಗೆ ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ನಂತರ ೮ ಗಂಟೆ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯರು ಸತೀಶ್ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ. ಅವರು ಬಂದು ನೋಡುವಷ್ಟರಲ್ಲಿ ಸಾಕಷ್ಟು ಸಾಮಾಗ್ರಿಗಳು ಸುಟ್ಟು ಹೋಗಿದ್ದು, ಬಳಿಕ ನಗರ ಪೊಲೀಸರನ್ನು ಮತ್ತು ಅಗ್ನಿಶಾಮಕ ದಳವನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ.
ಗೋಣಿಕೊಪ್ಪಲಿನಿಂದ ಅಗ್ನಿಶಾಮಕ ವಾಹನ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ, ಎರಡು ಲ್ಯಾಪ್ಟಾಪ್, ಎರಡು ಕಂಪ್ಯೂಟರ್ ಸೇರಿದಂತೆ ಸಾಕಷ್ಟು ಸಾಮಾಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಅಂಗಡಿ ಮಾಲಕ ಸತೀಶ್ ಅವರ ಪ್ರಕಾರ ಸುಮಾರು ೨೦ ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿರುವುದಾಗಿ ಹೇಳಲಾಗಿದೆ. ವೀರಾಜಪೇಟೆ ಡಿ.ವೈ.ಎಸ್.ಪಿ. ಜಯಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಕ್ಯಾತೆಗೌಡ ಸ್ಥಳ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಠಾಣಾಧಿಕಾರಿ ಮರಿಸ್ವಾಮಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.