ಮಡಿಕೇರಿ: ನಿರಂತರ ‘ಪವರ್ ಕಟ್’ ಸಮಸ್ಯೆಯನ್ನು ಎದುರಿಸುತ್ತಿರುವ ದಕ್ಷಿಣ ಕೊಡಗಿನ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮಡಿಕೇರಿ- ವೀರಾಜಪೇಟೆ ನಡುವೆ ಸುಮಾರು 32 ಕೋಟಿ ರೂ.ವೆಚ್ಚದ ವಿದ್ಯುತ್ ಲೈನ್ ಯೋಜನೆಯನ್ನು ರೂಪಿಸಲಾಗಿದ್ದು, ಈ ಯೋಜನೆಗೆ ಇದ್ದ ಎಡರು ತೊಡರುಗಳು ಇದೀಗ ಪರಿಹಾರಗೊಂಡಿರುವುದಾಗಿ ತಿಳಿದು ಬಂದಿದೆ.
ಮಳೆಗಾಲ ಬಂತೆಂದರೆ ಸಣ್ಣ ಮಳೆ ಗಾಳಿಗೂ ವೀರಾಜಪೇಟೆ ತಾಲೂಕು ಹೆಚ್ಚೂ ಕಡಿಮೆ ವಿದ್ಯುತ್ ಕ್ಷಾಮ ಎದುರಿಸುವದು ಸಾಮಾನ್ಯ. ಕೊಡಗಿನ ಜನತೆ ಅದರಲ್ಲಿಯೂ ವಿದ್ಯುತ್ ಗ್ರಾಹಕರು ಮಂಡ್ಯ, ಚಾಮರಾಜನಗರ ಜಿಲ್ಲೆಗಳಂತೆ ವಿದ್ಯುತ್ ‘ಬಿಲ್’ ಬಾಕಿ ಉಳಿಸಿಕೊಳ್ಳದೆ ಪ್ರಾಮಾಣಿಕ ಪಾವತಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ನಮ್ಮವರ ಪ್ರಾಮಾಣಿಕತೆಯೇ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆಯೋ ಎಂಬಂತೆ, ಸ್ವಾತಂತ್ರ್ಯ ಬಂದು 74 ವರ್ಷ ಕಳೆದರೂ ಇನ್ನೂ ಸಮರ್ಪಕ ವಿದ್ಯುತ್ ಪೂರೈಸಲು ಸಾಧ್ಯವಾಗಿಲ್ಲ.
ಮಳೆಗಾಲದ 4 ತಿಂಗಳುಗಳು ತಾಲೂಕಿನಾದ್ಯಂತ ವಿದ್ಯುತ್ ಕೊರತೆ, ವಿದ್ಯುತ್ ಕಂಬ ಧರೆಗುರುಳುವದು, ಟ್ರಾನ್ಸ್ಫಾರ್ಮರ್ ರಿಪೇರಿ, ಮಾರ್ಗದಾಳುಗಳ ಕೊರತೆ ಇತ್ಯಾದಿ ಇತ್ಯಾದಿ ಸಮಸ್ಯೆಗಳ ಸರಮಾಲೆಯೇ ಇದೆ. ಕೆಲವೊಂದು ಗ್ರಾಮಗಳಿಗಂತೂ 15 ರಿಂದ 20 ದಿನಗಳು ಕತ್ತಲೆಯಲ್ಲಿಯೇ ಇದ್ದು ರೂಢಿಯಾಗಿಬಿಟ್ಟಿದೆ.
ದಕ್ಷಿಣ ಕೊಡಗಿಗೆ ಪಿರಿಯಾಪಟ್ಟಣದಿಂದ ಆನೆಚೌಕೂರು-ತಿತಿಮತಿ ಮಾರ್ಗವಾಗಿ ಕಾಫಿ ತೋಟಗಳ ನಡುವೆ ಪೆÇನ್ನಂಪೇಟೆಗೆ 66 ಕೆ.ವಿ.ವಿದ್ಯುತ್ ಸರಬರಾಜಾಗುತ್ತಿದೆ. ಪೊನ್ನಂಪೇಟೆಯಿಂದ ವೀರಾಜಪೇಟೆಯ ಮಗ್ಗುಲದಲ್ಲಿರುವ ವಿದ್ಯುತ್ ಉಪಕೇಂದ್ರಕ್ಕೆ 66 ಕೆ.ವಿ. ವಿದ್ಯುತ್ ಮಾರ್ಗವನ್ನು 2008ಕ್ಕೂ ಮುನ್ನ ಯಶಸ್ಸಿಯಾಗಿ ಅಳವಡಿಸಲಾಯಿತು. ಆದರೆ, ವೀರಾಜಪೇಟೆ – ಮಡಿಕೇರಿ ಮಾರ್ಗ ಮಾತ್ರ ಕಳೆದ 12 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈ ಮಾರ್ಗ ಶೀಘ್ರ ಪೂರ್ಣಗೊಂಡಲ್ಲಿ ಮುಂದೆ ತೀತ್ರ ತರವಾದ ವಿದ್ಯುತ್ ಸಮಸ್ಯೆಯಿಂದ ದಕ್ಷಿಣ ಕೊಡಗಿಗೆ ಮುಕ್ತಿ ದೊರಕಲಿರುವುದಾಗಿ ಆಶಿಸಲಾಗಿದೆ.
ಮಡಿಕೇರಿ-ವೀರಾಜಪೇಟೆ 66 ಕೆ.ವಿ.ವಿದ್ಯುತ್ ಲೇನ್
ವೀರಾಜಪೇಟೆಯಿಂದ ಮಡಿಕೇರಿವರೆಗೆ 2008ರಲ್ಲಿಯೇ 66 ಕೆ.ವಿ.ವಿದ್ಯುತ್ ಮಾರ್ಗವನ್ನು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ಸಮರೋಪಾದಿಯಲ್ಲಿ ಮುಗಿಸಿದ್ದಲ್ಲಿ ಸುಮಾರು ರೂ.6.50 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆ ಪೂರ್ಣವಾಗುತ್ತಿತ್ತು. ಆದರೆ ಕೆಪಿಟಿಸಿಲ್ನ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಹಾಗೂ ಮೈಸೂರಿನ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸುಮಾರು 12 ವರ್ಷ ತಡವಾಗಿರುವ ಹಿನ್ನೆಲೆಯಲ್ಲಿ ಇದೀಗ ಉದ್ದೇಶಿತ 66 ಕೆ.ವಿ.ವಿದ್ಯುತ್ ಮಾರ್ಗದ ಯೋಜನಾ ಗಾತ್ರ ರೂ.32 ಕೋಟಿಗೆ ತಲುಪಿದೆ. ಕಾಮಗಾರಿ ಪೂರೈಸಲು ಸುಮಾರು 4 ಪಟ್ಟು ಅಧಿಕ ಅನುದಾನವನ್ನು ಇದೀಗ ಗುತ್ತಿಗೆದಾರರಿಗೆ ನೀಡಬೇಕಾಗಿದೆ.
ಪೆÇನ್ನಂಪೇಟೆ-ವೀರಾಜಪೇಟೆ 66 ಕೆ.ವಿ.ವಿದ್ಯುತ್ ಲೇನನ್ನು 2008ರಲ್ಲಿ ಸುಮಾರು ರೂ.4 ಕೋಟಿ ವೆಚ್ಚದಲ್ಲಿ ಸಮರೋಪಾದಿಯಲ್ಲಿ ಮುಗಿಸಲಾಗಿತ್ತು. ಬಸ್ತಿಪುರ( ಮೈಸೂರು)- ಮಡಿಕೇರಿ ವಿದ್ಯುತ್ ಮಾರ್ಗ ಪೂರೈಸಲು ಒಟ್ಟು ರೂ.85 ಕೋಟಿ ಅನುದಾನ ವ್ಯಯ ಮಾಡಲಾಗಿತ್ತು. ಮೈಸೂರಿನಿಂದ ಕುಶಾಲನಗರದವರೆಗೆ 220 ಕೆ.ವಿ.ಲೇನ್ ನಂತರ ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿಗೆ 66 ಕೆ.ವಿ. ವಿದ್ಯುತ್ ಲೇನ್ ಕಾಮಗಾರಿಯನ್ನು 2 ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಮುಗಿಸಲಾಗಿತ್ತು. ಇದೀಗ ಸುಮಾರು ರೂ.32 ಕೋಟಿ ವೆಚ್ಚದಲ್ಲಿ ವೀರಾಜಪೇಟೆ-ಮಡಿಕೇರಿ 66 ಕೆ.ವಿ.ಲೇನ್ ಕಾಮಗಾರಿ ಆರಂಭಿಸಲು ಕ್ಷಣಗಣನೆ ಆರಂಭಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಮುಂದಿನ ಅಕ್ಟೋಬರ್ ಒಳಗಾಗಿ ಮುಗಿಯಲಿದೆ. ಡಿಸೆಂಬರ್ಗೂ ಮುನ್ನ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಕೆಪಿಟಿಸಿಎಲ್ ಮಡಿಕೇರಿಯ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಅರಣ್ಯ ಇಲಾಖೆಯಿಂದ ಹಸಿರು ನಿಶಾನೆ: ಈ ಹಿಂದೆ (2008ರಲ್ಲಿ) ಮಡಿಕೇರಿ ಸಮೀಪ ಕರ್ಣಂಗೇರಿ ಮಾರ್ಗ ಮೀಸಲು ಅರಣ್ಯವಿದ್ದು, ಅರಣ್ಯ ಇಲಾಖಾಧಿಕಾರಿಗಳು ಉದ್ದೇಶಿತ ಕಾಮಗಾರಿಗೆ ಅಡ್ಡಿಯುಂಟು ಮಾಡುತ್ತಿರುವದಾಗಿ ಆರೋಪಿಸಿದ್ದ ಗುತ್ತಿಗೆದಾರರು ಉದ್ಧೇಶಿತ ರೂ.6.50 ಕೋಟಿ ವೆಚ್ಚದ ಕಾಮಗಾರಿಯನ್ನು ಕೈಬಿಟ್ಟಿದ್ದರು. ಆದರೆ, ಇದೀಗ ಅರಣ್ಯ ಇಲಾಖೆ ಕಾಮಗಾರಿ ಕೈಗೊಳ್ಳಲು ಹಸಿರು ನಿಶಾನೆ ತೋರಿಸಿರುವ ಹಿನ್ನೆಲೆಯಲ್ಲಿ ಕರ್ಣಂಗೇರಿಯ ಮೀಸಲು ಅರಣ್ಯದ ಸುಮಾರು 4 ಕಿ.ಮೀ.ಮಾರ್ಗದಲ್ಲಿ 12ಕ್ಕೂ ಅಧಿಕ ವಿದ್ಯುತ್ ಗೋಪುರ ಅಳವಡಿಸಲಿರುವ ಅಡ್ಡಿ ನಿವಾರಣೆಯಾದಂತಾಗಿದೆ.
ಉದ್ಧೇಶಿತ ಕಾಮಗಾರಿ ಮುಗಿದಲ್ಲಿ ದಕ್ಷಿಣ ಕೊಡಗು ನಿರಂತರ ‘ಪವರ್ ಕಟ್’ ಸಮಸ್ಯೆಯಿಂದ ಮುಕ್ತವಾಗುತ್ತದೆ. ಪಿರಿಯಾಪಟ್ಟಣ-ಆನೆ ಚೌಕೂರು ಮಾರ್ಗದ 66 ಕೆ.ವಿ.ವಿದ್ಯುತ್ ಲೇನ್ ಗಾಳಿ ಮಳೆಗೆ ಮರಬಿದ್ದು ಸಂಪರ್ಕ ಕಡಿತಗೊಂಡಲ್ಲಿ ಕುಶಾಲನಗರ-ಮಡಿಕೇರಿ ಮಾರ್ಗ ವೀರಾಜಪೇಟೆ ಮಗ್ಗುಲದಲ್ಲಿರುವ ವಿದ್ಯುತ್ ಉಪಕೇಂದ್ರದ ಮೂಲಕ ಪೆÇನ್ನಂಪೇಟೆ ಉಪಕೇಂದ್ರಕ್ಕೆ ವಿದ್ಯುತ್ ಸರಬರಾಜು ಸಾಧ್ಯವಾಗುತ್ತದೆ. ಇದರಿಂದಾಗಿ ದಕ್ಷಿಣ ಕೊಡಗು ನಿರಂತರ ವಿದ್ಯುತ್ ಕಿರಿ ಕಿರಿ ಇಲ್ಲದೆ ನಿರಾಳವಾಗಲು ಸಾಧ್ಯವಾಗಲಿದೆ ಎಂದು ಆಶಿಸಲಾಗಿದೆ.
ಬಾಳೆಲೆ ಉಪಕೇಂದ್ರ ಪ್ರಗತಿಯಲ್ಲಿ: ಬಾಳೆಲೆ ವಿದ್ಯುತ್ ಉಪಕೇಂದ್ರಕ್ಕೆ 2 ಎಕರೆ ನಿವೇಶನ ಅಗತ್ಯವಿದು,್ದ ಸರ್ಕಾರಿ ಜಮೀನಿಲ್ಲದ ಹಿನ್ನೆಲೆ ಖಾಸಗಿ ವ್ಯಕ್ತಿಗಳಿಂದ ಖರೀದಿ ಮಾಡಬೇಕಾಗಿದೆ. ಖಾಸಗಿ ವ್ಯಕ್ತಿಗೆ ಎಕರೆಗೆ ನೀಡಬೇಕಾದ ಖರೀದಿ ಮೊತ್ತವನ್ನು ಕೊಡಗು ಜಿಲ್ಲಾಧಿಕಾರಿಗಳು ನಿರ್ಧರಿಸಿದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮವು ಖಾಸಗಿ ವ್ಯಕ್ತಿಗೆ ನಿರ್ಧರಿತ ಮೊತ್ತವನ್ನು ನೀಡುವದಲ್ಲದೆ, ನಂತರವೇ ಉಪ ಕೇಂದ್ರ ಕಾಮಗಾರಿ ಆರಂಭ ಸಾಧ್ಯ ಎಂದು ಕೆಪಿಟಿಸಿಎಲ್ನ ಮಡಿಕೇರಿ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ವೀರಾಜಪೇಟೆ-ಮಡಿಕೇರಿ 66 ಕೆ.ವಿ. ವಿದ್ಯುತ್ ಲೈನ್ಗೆ 32 ಕೋಟಿ ರೂ.ಯೋಜನೆ
- Advertisement -