ಮಡಿಕೇರಿ: ವೀರಾಜಪೇಟೆಯ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ಸಂಶಯವಿದೆ ಎಂದು ಆರೋಪಿಸಿರುವ ಸಂಘದ ನಿರ್ದೇಶಕರಾದ ಡಿ.ಐ.ಎಜಾಜ್ ಹಾಗೂ ಪಿ.ಹನೀಫ್, ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ತಪ್ಪಿತಸ್ಥರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕರು ಸರಿಯಾದ ಲೆಕ್ಕ ಪತ್ರಗಳನ್ನು ಮಂಡಿಸುತ್ತಿಲ್ಲ. ಅವ್ಯವಹಾರದ ಬಗ್ಗೆ ಪ್ರಶ್ನಿಸಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಸಂಬಂಧಿಸಿದ ಇಲಾಖೆಗೆ ದೂರು ನೀಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಸಂಘ ಹೆಚ್ಚು ಬಡ್ಡಿಯ ಆಮಿಷವೊಡ್ಡಿದ ಪರಿಣಾಮ ದೊಡ್ಡ ಮೊತ್ತದ ನಿರಖು ಠೇವಣಿ ಇಟ್ಟವರಿಗೆ ಅಸಲು ಕೂಡಾ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಇಷ್ಟೆಲ್ಲಾ ಗೊಂದಲದ ನಡುವೆಯೂ ಸಂಘ ಲಾಭದಲ್ಲಿದೆ ಎಂದು ಆಡಳಿತ ಮಂಡಳಿ ವರದಿ ನೀಡುತ್ತಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ. ಉನ್ನತ ಮಟ್ಟದ ಅಧಿಕಾರಿಗಳ ಮೂಲಕ ಲೆಕ್ಕಪತ್ರ ಪರಿಶೋಧನೆ ನಡೆಸಿ ತನಿಖೆಗೆ ಒಳಪಡಿಸಬೇಕು ಎಂದು ಡಿ.ಐ.ಎಜಾಜ್ ಹಾಗೂ ಪಿ.ಹನೀಫ್ ಒತ್ತಾಯಿಸಿದರು.