ಹೊಸದಿಲ್ಲಿ: ಕೊರೋನಾ ವೈರಸ್ ನಿಂದ ತತ್ತರಿಸಿರುವ ಚೀನಾದಿಂದ ಸ್ವದೇಶಕ್ಕೆ ಭಾರತೀಯರನ್ನು ಸ್ಥಳಾಂತರಿಸಿದ್ದ ಏರ್ ಇಂಡಿಯಾ ವಿಶೇಷ ವಿಮಾನಗಳ ಸಿಬ್ಬಂದಿಗೆ ಒಂದು ವಾರ ರಜೆ ನೀಡಲಾಗಿದೆ ಎಂದು ಏರ್ ಇಂಡಿಯಾ ವಕ್ತಾರ ತಿಳಿಸಿದ್ದಾರೆ.
ಚೀನಾದ ವುಹಾನ್ ನಗರದಿಂದ ಏರ್ ಇಂಡಿಯಾದ ಎರಡು ವಿಶೇಷ ವಿಮಾನಗಳಲ್ಲಿ ಸುಮಾರು 647 ಭಾರತೀಯರನ್ನು ಹಾಗೂ 7 ಮಂದಿ ಮಾಲ್ಡೀವ್ಸ್ ಮಂದಿಯನ್ನು ಭಾರತಕ್ಕೆ ಕರೆ ತರಲಾಗಿತ್ತು.
ವುಹಾನ್ ನಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಏರ್ ಇಂಡಿಯಾದ 64 ಸಿಬ್ಬಂದಿ ಪಾಲ್ಗೊಂಡಿದ್ದರು. ಇದರಲ್ಲಿ 30 ಕ್ಯಾಬಿನ್ ಸಿಬ್ಬಂದಿ, 8 ಪೈಲಟ್ಸ್, 10 ವಾಣಿಜ್ಯ ಸಿಬ್ಬಂದಿ ಹಾಗೂ ಒಬ್ಬರು ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.