ಬದಿಯಡ್ಕ: ಜಗದಗಲ ವ್ಯಾಪಿಸಿರುವ ಕೊರೊನಾ ಮಹಾಮಾರಿ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳೂ ಮಹಾಮಾರಿಯ ಆಘಾತದಿಂದ ತತ್ತರಗೊಂಡಿದೆ. ಈ ಪೈಕಿ ಭಾರತವೂ ಹೊರತಲ್ಲ. ಆದರೆ ಇದರ ಜೊತೆಗೆ ಭಾರತದಂತಹ ಅಭಿವೃದ್ದಿಶೀಲ ರಾಷ್ಟ್ರದ ಮಧ್ಯಮ ವರ್ಗದ ಮೇಲೆ ಆಗಿರುವ ಪ್ರಹಾರ ಕಳವಳಕಾರಿ. ಆರ್ಥಿಕ ದೃಢತೆ ಇರುವವರು ಸುಧಾರಿಸಿಯಾರು. ಆದರೆ ಬಡ-ಮಧ್ಯಮ ವರ್ಗ ಉಸಿರುಗಟ್ಟಿ ಸಾಯುವ ಸ್ಥಿತಿ ನಿರ್ಮಾಣವಾಗುತ್ತಿರುವುದು ಸರ್ವವಿಧಿತ. ಸಣ್ಣ ವ್ಯಾಪಾರಿಗಳು, ಪುರೋಹಿತ ವರ್ಗ,ವಿವಿಧ ಕ್ಷೇತ್ರಗಳಲ್ಲಿ ಕಾರ್ಯವೆಸಗುತ್ತಿರುವ ಕಲಾವಿದರು, ಛಾಯಾಚಿತ್ರ ವೃತ್ತಿ ವ್ಯವಸಾಯದವರು, ಸಣ್ಣ ಹಿಡುವಳಿದಾರರು ಖಂಡಿತಾ ನೆಲಕ್ಕಚ್ಚುವರು.
ಛಾಯಾಚಿತ್ರ ಕ್ಷೇತ್ರ ಇಂದು ಮುಂಚೂಣಿಯಲ್ಲಿ ಸಮಾಜದ ಎಲ್ಲಾ ವಿಭಾಗಕ್ಕೂ ಅಗತ್ಯ ಸೇವೆಯೊದಗಿಸುವ, ಬೇಡಿಕೆಯ ವ್ಯವಸಾಯ. ಇಲ್ಲಿ ಲಕ್ಷಾಂತರ ರೂ.ಗಳನ್ನು ವ್ಯಯಿಸಿ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಅಳವಡಿಸಿ ತಮ್ಮ ಕಾರ್ಯಕ್ಷೇತ್ರದಲ್ಲಿ ದುಡಿಯುವ ಅನೇಕ ಸಾಧಕರು ತಮ್ಮ ಜೀವನ ಮಾರ್ಗವನ್ನು ಇದೇ ಕ್ಷೇತ್ರದಲ್ಲಿ ಕಂಡುಕೊಂಡವರು. ಶೇ.90 ಛಾಯಾಗ್ರಾಹಕರೂ ಮಧ್ಯಮ ವರ್ಗದವರೆಂಬುದೂ ಗಮನಾರ್ಹ.
ಆರ್ಥಿಕ ನೆರವುಗಳನ್ನು ಬ್ಯಾಂಕ್ ಸಹಿತ ವಿವಿಧ ಮೂಲಗಳಿಂದ ಸಂಪಾದಿಸಿ ಸಮಾಜದ ಅಗತ್ಯಗಳನ್ನು ಕಂಡುಕೊಂಡು ಸ್ಟುಡಿಯೋ ಇರಿಸಿ ವ್ಯವಸಾಯಗೈಯ್ಯುವ ಛಾಯಾಗ್ರಾಹಕರಿಗೆ ಸೀಮಿತ ಕಾಲಾವಧಿಯ ಸೇವಾ ದಿನಗಳಿರುವುದೂ ಗಮನಾರ್ಹ. ಸಮಾನ್ಯವಾಗಿ ಡಿಸೆಂಬರ್ ಬಳಿಕ ಏಪ್ರಿಲ್-ಮೇ ತಿಂಗಳುಗಳ ವರೆಗೆ ಮಾತ್ರ ಛಾಯಾಗ್ರಾಹಕರಿಗೆ ಉದ್ಯೋಗ ಲಭ್ಯವಾಗುತ್ತದೆ. ಸ್ಪರ್ಧಾತ್ಮಕವಾದ ಇಂದಿನ ಕಾಲಘಟ್ಟದಲ್ಲಿ ಬದುಕಿಗಾಗಿ ಹೆಣಗಾಡುವ ಮಂದಿಗಳಲ್ಲಿ ಛಾಯಾಗ್ರಾಹಕರು ತಮ್ಮ ವೃತ್ತಿಯ ಬಹುಬೇಡಿಕೆಯ ಋತುವನ್ನು ಪ್ರಸ್ತುತ ಕೋವಿಡ್ ವೈರಸ್ ನಿಂದಾದ ನಿಯಂತ್ರಣಗಳ ಕಾರಣ ಕಳಕೊಂಡು ಅತಂತ್ರರಾಗಿರುವುದು ಸಾವಿರಾರು ಛಾಯಾಗ್ರಾಹಕರ ಕುಟುಂಬವನ್ನು ಭೀತಿಗೊಳಿಸುವ ಸಾಧ್ಯತೆಗಳತ್ತ ಕೊಂಡೊಯ್ದಿರುವುದು ಕಳವಳಕಾರಿಯಾಗಿದೆ.
ಒಂದೆಡೆ ಲಕ್ಷಾಂತರ ರೂ.ವ್ಯಯಿಸಿ ವೃತ್ತಿ ನಿರ್ವಹಣೆಗೆ ವ್ಯವಸ್ಥೆಗೊಳಿಸಿದ ದುಬಾರಿ ಕ್ಯಾಮಾರಗಳು, ಸಾವಿರಾರು ಬಾಡಿಗೆ ದರ ವ್ಯಯಿಸಿ ಇರವನ್ನು ಜೋಪಾನಪಡಿಸುವ ಸ್ಟುಡಿಯೋಗಳು,ಅವರೊಂದಿಗೆ ಹೆಗಲಾಗುವ ಸಿಬ್ಬಂದಿಗಳು ಮೊದಲಾದ ವ್ಯವಸ್ಥೆಗಳ ಸಮತೋಲನಕ್ಕೆ ಸರ್ಕಾರ ಬೆಂಬಲ ನೀಡದಿದ್ದರೆ ಮುಂದಿನ ದಿನಗಳು ಪೂರ್ವಕಾಲದ ಛಾಯಾಚಿತ್ರಗಳಂತೆ ಕ್ಯಾಮರಾ ರೋಲ್ ಗಳ ಕಪ್ಪು ಬಿಳುಪುಗಳ ಕತ್ತಲೆಯಲ್ಲಿ ಮರೆಯಾಗುವುದರಲ್ಲಿ ಸಂಶಯವಿಲ್ಲ!
ಉದಯ ಕಂಬಾರ್ ವರ್ಣ.
ವೃತ್ತಿಪರ ಛಾಯಾಗ್ರಾಹಕ.