ರಾಮನಗರ: ನಗರದ ವೃಷಭಾವತಿ ನದಿಯಿಂದ ರಾಮನಗರ ಜಿಲ್ಲೆಯ ಇಪ್ಪತ್ತಕ್ಕೂ ಹೆಚ್ಚು ಗ್ರಾಮಗಳ ಜಮೀನುಗಳಿಗೆ ಕೊಳಚೆ ನೀರು ಹೋಗುತ್ತಿದ್ದು ಅದನ್ನು ಆಧುನಿಕ ತಂತ್ರಜ್ಞಾನದ ಮೂಲಕ ಶುದ್ದೀಕರಿಸಿ ಬಿಡುಗಡೆ ಮಾಡುವಂತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಗುರುವಾರ ಹೇಳಿದರು.
ರಾಮನಗರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ವೃಷಭಾವತಿ ನದಿಯಿಂದ ವಾರ್ಷಿಕ 5-6 ಟಿಎಂಸಿ ಕೊಳಚೆ ನೀರು ಹೋಗುತ್ತಿದೆ. ಸದ್ಯ ನಾಯಂಡಹಳ್ಳಿ, ನೀಲಸಂದ್ರ ಮತ್ತು ದೊಡ್ಡಬೆಲೆಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕಗಳು ಇವೆ. ಇವು ಸಾಕಾಗುತ್ತಿಲ್ಲ. ಹೀಗಾಗಿ ನದಿಯಲ್ಲಿ ಹರಿಯುವ ಪೂರ್ಣ ಪ್ರಮಾಣದ ನೀರನ್ನು ಶುದ್ಧೀಕರಿಸಲು ಆಗುತ್ತಿಲ್ಲ. ಹೀಗಾಗಿ ಕೊಳಚೆ ನೀರು ಹರಿದು ಹೋಗುತ್ತಿದೆ. ಇದನ್ನು ಸರಿ ಮಾಡಬೇಕಾದರೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಕೊಳಚೆ ನೀರಿನಿಂದಲೇ ಇಟ್ಟುಮೊಡು, ರಾಮನಹಳ್ಳಿ, ಗೋಡಹಳ್ಳಿ, ಬೈರಮಂಗಲ ಸೇರಿದಂತೆ 19 ಗ್ರಾಮಗಳ ರೈತರು ಕೃಷಿಗೆ ಬಳಸುತ್ತಿದ್ದಾರೆ. ಇವರಿಗೆ ಶುದ್ದೀಕರಣ ನೀರು ಕೊಡುವುದರಿಂದ ಹೆಚ್ಚು ಅನುಕೂಲ ಆಗುತ್ತದೆ. ಇಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ಬಳಸುವ ಜನರಿಗೂ ಆರೋಗ್ಯದ ಸಮಸ್ಯೆ ಬರುವುದಿಲ್ಲ ಎಂದು ಹೇಳಿದರು.
ಬೈರಮಂಗಲ ಕೆರೆಗೆ ಕೇವಲ ಶುದ್ಧೀಕರಿಸಿದ ನೀರು ಹೋಗುವ ಹಾಗೆ ಮಾಡಲು ಪ್ರತ್ಯೇಕ ಕಾಲುವೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ರಾಮನಗರ ಜಿಲ್ಲೆಯಲ್ಲಿ 35 ಕೋಟಿ ರೂಪಾಯಿ ವೆಚ್ಚದಲ್ಲಿ 26 ಕಡೆ ಚೆಕ್ ಡ್ಯಾಮ್ ಗಳನ್ನು ನಿರ್ಮಿಸುತ್ತಿದ್ದು ಒಂದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.
ಕಣ್ವ ಜಲಾಶಯದಿಂದ ನೀರು ಎತ್ತಿ 18 ಕೆರೆಗಳಿಗೆ ನೀರು ತುಂಬಿಸುವ 28 ಕೋಟಿ ವೆಚ್ಚದ ಯೋಜನೆ ಪ್ರಗತಿಯಲ್ಲಿ ಇದ್ದು 18 ತಿಂಗಳಲ್ಲಿ ಮುಗಿಸುವುದಾಗಿ ಹೇಳಿದರು.
ಬೈರಮಂಗಲ ಎಡ ಮತ್ತು ಬಲದಂಡೆ ಕಾಲುವೆಯನ್ನು 106 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಯೋಜನೆ ಸಿದ್ಧ ಆಗಿದ್ದು ಆದಷ್ಟು ಬೇಗ ಟೆಂಡರ್ ಕರೆಯಲಾಗುವುದು ಎಂದರು.
ಸಣ್ಣ ನೀರಾವರಿ ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಎನ್.ನಾಗರಾಜು, ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಂ.ಕಿಶೋರ್, ಸಹಾಯಕ ಎಂಜಿನಿಯರ್ ಕೊಟ್ರೇಶ್ ಸಭೆಯಲ್ಲಿ ಹಾಜರಿದ್ದರು.