Monday, July 4, 2022

Latest Posts

ವೇತನ ನೀಡಿ ಪುಣ್ಯ ಕಟ್ಟಿಕೊಳ್ಳಿ ಕೆಎಸ್‌ಆರ್‌ಟಿಸಿ ನೌಕರರ ಅಳಲು: ನಷ್ಟದಲ್ಲೂ ಸಂಚರಿಸುತ್ತಿವೆ ಸಾರಿಗೆ ಸಂಸ್ಥೆ ಬಸ್‌ಗಳು.

ಕೊಪ್ಪಳ: ಕಳೆದು ಒಂದುವರೆ ತಿಂಗಳಿಂದ ಬಂದ್ ಆಗಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಒಂದು ವಾರದಿಂದ ಸಂಚಾರ ಆರಂಭಿಸಿವೆ. ಆದರೆ ಸಂಸ್ಥೆಗೆ ಯಾವುದೇ ರೀತಿಯಲ್ಲೂ ಲಾಭ ಇಲ್ಲದೆ ನಷ್ಟದಲ್ಲಿ ಬಸ್ ಗಳು ಸಂಚರಿಸಿದರೆ, ಇತ್ತ ನೌಕರರು ಕೂಡ ವೇತನ ಇಲ್ಲದೆ ಪರದಾಡುವಂತಾಗಿದೆ.

ಕೆಎಸ್‌ಆರ್‌ಟಿಸಿ ಈಶಾನ್ಯದ ಕೊಪ್ಪಳ ವಿಭಾಗದಿಂದ 14 ಬಸ್‌ಗಳು ಸಂಚಾರ ನಡೆಸುತ್ತಿವೆ. ಮೇ 4ರಂದು ಈ ಪ್ರಕ್ರಿಯೆ ಆರಂಭವಾಗಿದ್ದು, ಪ್ರಯಾಣಿಕರು ಸಂಚಾರ ನಡೆಸಿದ ಪರಿಣಾಮ ಮೊದಲ ದಿನ ₹ 25ರಿಂದ 30 ಸಾವಿರ ಸಂಗ್ರಹವಾಗುತ್ತಿದ್ದು, ಈಗ ಜನರಿಲ್ಲದೆ ನಿತ್ಯ 20ರಿಂದ 25 ಸಾವಿರ ರೂ. ಸಂಗ್ರಹವಾಗುತ್ತಿದೆ. ಇದರಿಂದ ಇಂಧನ, ನಿಲ್ದಾಣ ಹಾಗೂ ಬಸ್‌ಗಳ ಶುಚಿತ್ವಕ್ಕೆ ತಗಲುವ ವೆಚ್ಚ ಎಲ್ಲಾ ಲೆಕ್ಕ ಹಾಕಿದರೂ ನಷ್ಟ ಅನುಭವಿಸುತ್ತಿದೆ. ಇದೇ ಕಾರಣಕ್ಕೆ ಸಂಸ್ಥೆಗೆ ಇನ್ನಷ್ಟು ಹೆಚ್ಚಿನ ಹೊರೆ ಆಗಬಾರದು ಎಂಬ ಉದ್ದೇಶಕ್ಕಾಗಿ 25 ಪ್ರಯಾಣಿಕರು ತುಂಬಿದ ನಂತರವೇ ಬಸ್‌ಗಳನ್ನು ರಸ್ತೆಗೆ ಇಳಿಸಲಾಗುತ್ತಿದೆ.

ಕೊಪ್ಪಳ ವಿಭಾಗದಲ್ಲಿ ಕೊಪ್ಪಳ, ಕುಕನೂರು, ಯಲಬುರ್ಗಾ, ಕುಷ್ಟಗಿ, ಹಾಗೂ ಗಂಗಾವತಿ ಸೇರಿ 5 ಡಿಫೋಗಳು ಇವೆ. ಆದರೆ ಲಾಕ್‌ಡೌನ್‌ ಆಗುವುದಕ್ಕೂ ಮೊದಲು ನಿತ್ಯ 411 ಬಸ್ ಗಳು ಸಂಚರಿಸಿ ನಿತ್ಯ 30 ಲಕ್ಷಕ್ಕೂ ಅಧಿಕ ಆದಾಯ ಬರುತ್ತಿತ್ತು. ನಿತ್ಯ ಬೆಳಿಗ್ಗೆಯಿಂದ ಸಂಜೆವರೆಗೂ 8ರಿಂದ 10 ಟ್ರಿಪ್‌ ಹೋಗುತ್ತಿದ್ದ ಬಸ್‌ಗಳು ಈಗ ಎರಡರಿಂದ ಮೂರು ಟ್ರಿಪ್ ಮಾತ್ರ ಸಂಚರಿಸುತ್ತಿವೆ. ಜತೆಗೆ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಈಗಿರುವ ಸೀಟು‌ಗಳಲ್ಲೇ ಶೇ. 50ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆ ಮಾಡಿ ಸಂಚರಿಸುತ್ತಿರುವ ಕಾರಣ ಸಂಗ್ರಹ ಮೊತ್ತ ಕಡಿಮೆ ಆಗಿದೆ.

ಬಸ್‌ಗಳು ಕೊಪ್ಪಳ ಮಾರ್ಗದಿಂದ ಕುಕನೂರು, ಯಲಬುರ್ಗಾ, ಇತ್ತ ಗಂಗಾವತಿ, ಕುಷ್ಟಗಿ, ಎಲ್ಲಾ ತಾಲ್ಲೂಕುಗಳಿಗೂ ಸಂಚರಿಸುತ್ತಿವೆ. ೪೫ ಜನ ಚಾಲಕರು, ನಿರ್ವಾಹಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ್ವಯಂ ರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಿದ್ದಾರೆ.

ಹೆಚ್ಚಾಗಿ ಕೊಪ್ಪಳ, 4, ಹಾಗೂ ಗಂಗಾವತಿಯ 4 ಬಸ್ ಗಳು, ಕುಷ್ಟಗಿ, ಯಲಬುರ್ಗಾ, ಕುಕನೂರು ಡಿಪೋಗಳ ಎರೆಡೆರಡು ಸೇರಿ 14 ಬಸ್‌ಗಳು ಸಂಚರಿಸುತ್ತಿವೆ.

ಒಂದು ತಾಲ್ಲೂಕಿನಿಂದ ಮತ್ತೊಂದು ತಾಲ್ಲೂಕಿಗೆ ಬೈಕ್‌ಗಳಲ್ಲೇ ಅನೇಕರು ಸಂಚರಿಸುತ್ತಿದ್ದಾರೆ. ಹೀಗಾಗಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗಿದೆ. ಹೆಚ್ಚಿನ ಸ್ಪಂದನ ದೊರೆಯದ ಕಾರಣ ಬಸ್‌ಗಳ ಸಂಖ್ಯೆ ಹೆಚ್ಚಿಸದಿರಲು ವಿಭಾಗ ನಿರ್ಧರಿಸಿದೆ. ಸಂಖ್ಯೆ ಹೆಚ್ಚಳವಾದಲ್ಲಿ ಮಾತ್ರ ಇನ್ನಷ್ಟು ಬಸ್‌ಗಳು ರಸ್ತೆಗೆ ಇಳಿಯಲಿವೆ. ಎಂದು ಡಿಟಿಒ ಚಂದ್ರಶೇಖರ ಅವರು ಹೇಳಿದರು.

ಬಸ್‌ಗಳ ಸ್ವಚ್ಛತೆಗೆ ಆದ್ಯತೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ನಿತ್ಯವೂ ಫಿನಾಯಿಲ್ ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಬಸ್‌ಗಳು ಸಂಚರಿಸಿ ಡಿಪೊಗೆ ಹಿಂದಿರುಗಿದ ನಂತರ ಸ್ಯಾನಿಟೈಸರ್‌ ಸ್ಪ್ರೇ ಮೂಲಕ ಶುಚಿಗೊಳಿಸುವ ಕಾರ್ಯ ನಡೆಯುತ್ತಿದೆ. ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ. ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಂಸ್ಥೆಯ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಿದ್ದಾರೆ. ಎಂದು ತಿಳಿಸಿದರು.

ನೌಕರರಿಗೆ ವೇತನ ಇಲ್ಲದೆ ಪರದಾಟ: ಲಾಕ್‌ಡೌನ್‌ ಕಾರಣಕ್ಕೆ ಒಂದೂವರೆ ತಿಂಗಳು ಬಸ್‌ಗಳು ರಸ್ತೆಗೆ ಇಳಿಯದೇ ಸಂಸ್ಥೆ ನಷ್ಟ ಅನುಭವಿಸಿದೆ. ಇದರಿಂದ ಕೆಎಸ್ ಆರ್ ಟಿಸಿ ನೌಕರರು ಹಾಗೂ ಸಿಬ್ಬಂದಿಗಳು ವೇತನ ಇಲ್ಲದೆ ಅತಂತ್ರ ಜೀವನದಲ್ಲಿ ಪರದಾಡುವಂತಾಗಿದೆ.

ಒಂದೂವರೆ ತಿಂಗಳು ಬಸ್‌ಗಳು ಸಂಚರಿಸಿಲ್ಲ ಈಗಾಗಿ ನಷ್ಟದ ಪರಿಸ್ಥಿತಿಯಲ್ಲಿ ವೇತನ ನೀಡುತ್ತಿಲ್ಲ. ಈಗಾಗಿ ನಮ್ಮ ಜೀವನ ಅತಂತ್ರವಾಗಿದೆ. ಅತ್ತ ಪ್ರಧಾನಮಂತ್ರಿ ಯಾರ ವೇತನ ನಿಲ್ಲಿಸುವಂತಿಲ್ಲ ಎಂದು ಹೇಳುತ್ತಿದ್ದಾರೆ. ಇತ್ತ ನಮ್ಮ ವೇತನ ನೀಡುತ್ತಿಲ್ಲ.
ನಾವೇನು ಪಾಪ ಮಾಡಿದೇವು. ನಾವು ನೌಕರರು ಅಲ್ಲವೇ? ಎಂದು ಪ್ರಶ್ನಿಸಿದ ಅವರು, ನಾವು ಕೆಲಸ ಮಾಡಲು ಸಿದ್ದರಿದ್ದೇವೆ. ಬಸ್ ಗಳನ್ನು ಓಡಿಸಿ. ಇಲ್ಲವೇ ನಮಗೆ ವೇತನ ವನ್ನಾದರೂ ನೀಡಿ ಪುಣ್ಯ ಕಟ್ಟಿ ಕೊಳ್ಳಿ ಎಂದು ಹೆಸರು ಹೇಳಲಿಚ್ಚಿಸದ ನೌಕರರು ತಮ್ಮ ಅಳಲನ್ನು ತೋಡಿಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss