ಬಳ್ಳಾರಿ: ಮನರೇಗಾ ಅಡಿ ಬಳ್ಳಾರಿ ತಾಲೂಕಿನ ಸಂಜೀವನರಾಯನಕೋಟೆ ಗ್ರಾಮ ಪಂಚಾಯಿತಿಯ ಮಿಂಚೇರಿ ಗ್ರಾಮದ ಬಳಿಯ ರಾಮನಕೊಳ ಹಳ್ಳದಿಂದ ಅಸುಂಡಿ ಗ್ರಾಮದ ವೇದಾವತಿ ನದಿ(ಹಗರಿ)ಯವರೆಗೆ ನಡೆಯುತ್ತಿರುವ ಹಳ್ಳದ ಪುನಶ್ಚೇತನ ಕಾಮಗಾರಿಯ ವೀಕ್ಷಣೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಂಗಳವಾರ ನಡೆಸಿದರು.
20ಕೋಟಿ ರೂ.ವೆಚ್ಚದಲ್ಲಿ 24ಕಿ.ಮೀ ದೂರದರವರೆಗೆ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು 4.72ಲಕ್ಷ ಮಾನದದಿನಗಳ ಸೃಜನೆ ಅಂದಾಜಿಸಲಾಗಿದೆ. ಇಲ್ಲಿನ ಕಿರುಬೆಟ್ಟ ಪ್ರದೇಶದಿಂದ ಮಳೆಗಾಲದ ಸಂದರ್ಭದಲ್ಲಿ ಬರುವ ನೀರನ್ನು ನಾಲದಲ್ಲಿ ಚೆಕ್ಡ್ಯಾಂ ಮೂಲಕ ತಡೆಯುವುದು ಮತ್ತು ನಾಲಾದ ಎರಡು ಬದಿಗಳನ್ನು ಕಲ್ಲಿನಿಂದ ಭದ್ರಗೊಳಿಸುವ ಕಾಮಗಾರಿ ನಡೆಯುತ್ತಿದೆ. ನಾಲಾದ ಬದಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡುವ ಕಾರ್ಯ ನಡೆದಿದೆ. ಈ ಯೋಜನೆ ಅನುಷ್ಠಾನದಿಂದ ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವ ಬಳ್ಳಾರಿ ತಾಲೂಕಿನ ಸಂಜೀವರಾಯನಕೋಟೆ, ಶಂಕರಬಂಡೆ, ಬೆಳಗಲ್ಲು, ಹಲಕುಂದಿ, ಅಮರಾಪುರ ಗ್ರಾಪಂಗಳ ವ್ಯಾಪ್ತಿಯ ಗ್ರಾಮಗಳು ಸೇರಿದಂತೆ 25 ಗ್ರಾಮಗಳಲ್ಲಿ ಜಲಮೂಲಗಳು ಅಭಿವೃದ್ಧಿಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ರಾಮನಕೊಳ ಹಳ್ಳದ ಬಳಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಣೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಗತ್ಯ ಸಲಹೆ-ಸೂಚನೆಗಳನ್ನು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡಿದರು
ನರೇಗಾ ಅಡಿ ಕೆಲಸದಲ್ಲಿ ತಲ್ಲೀನರಾದ ಕಾರ್ಮಿಕರೊಂದಿಗೆ ಇದೇ ಸಂದರ್ಭದಲ್ಲಿ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು ಅಂತರ್ಜಲ ವೃದ್ಧಿ ಉದ್ದೇಶದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಕಾಮಗಾರಿ ಚೆನ್ನಾಗಿ ನಡೆಯುತ್ತಿದೆ ಮತ್ತು ಜನರು ಕೂಡ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದರು.
24ಕಿ.ಮೀ ವ್ಯಾಪ್ತಿಯಲ್ಲಿ ನಾಲಾ ಪುನಶ್ಚೇತನಗೊಳಿಸಲು ಮಣ್ಣಿನ ತಡೆಗೋಡೆ ನಿರ್ಮಾಣ ಮಾಡಿ (ಹೊರಹರಿವು ಮಾಡುವುದು), ಮಲ್ಟಿ ಚೆಕ್ಡ್ಯಾಂ ನಿರ್ಮಾಣ, ರಿಚಾರ್ಜ್ ವೆಲ್, ಹಳ್ಳಹೂಳೆತ್ತುವುದು ಮತ್ತು ಹಳ್ಳದ ಎರಡು ಕಡೆ ಒಡ್ಡು ಬಲಪಡಿಸುವುದು, ಬೋಲ್ಡರ್ ಚೆಕ್, ಹಳ್ಳದ ಎರಡು ಕಡೆ ಬದು ಮತ್ತು 10 ಎಕರೆ ಬ್ಲಾಕ್ ಸಸಿ ನೆಡುವುದು, ಗ್ಯಾಬಿಯನ್ ಚೆಕ್ಡ್ಯಾಂ, ಸಣ್ಣ ಕೆರೆ,ಗೋಕಟ್ಟೆ ನಿರ್ಮಾಣ, ಮಿಂಚೇರಿ ಗುಡ್ಡದಲ್ಲಿ ಕಂಟೂರು ಟ್ರೆಂಚ್, ರೈತರ ಹೊಲದಲ್ಲಿ 70 ಬದು ಹಾಗೂ 50 ಕೃಷಿ ಹೊಂಡಗಳ ನಿರ್ಮಾಣದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, 2 ಸಾವಿರ ಜನರಿಗೆ ಈ ನರೆಗಾ ಅಡಿ ಪ್ರತಿನಿತ್ಯ ಉದ್ಯೋಗ ಅವಕಾಶ ಮಾಡಿಕೊಡಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ನಾಗೇಂದ್ರ, ಸಂಸದ ವೈ.ದೇವೇಂದ್ರಪ್ಪ, ಜಿಪಂ ಅಧ್ಯಕ್ಷ ಭಾರತಿ ತಿಮ್ಮಾರೆಡ್ಡಿ, ತಾಪಂ ಅಧ್ಯಕ್ಷೆ ಎಸ್.ಆರ್.ಲೀಲಾವತಿ, ಜಿಪಂ ಸಿಇಒ ಕೆ.ನಿತೀಶ್, ಜಿಪಂ ಉಪಕಾರ್ಯದರ್ಶಿ ಅಮರೇಶ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ತಾಪಂ ಗ್ರಾಮೀಣ ಉದ್ಯೋಗ ಖಾತರಿ ಸಹಾಯಕ ನಿರ್ದೇಶಕ ಆರ್.ಕೆ.ಬಸವರಾಜ ಸೇರಿದಂತೆ ಜಿಪಂ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.