Thursday, July 7, 2022

Latest Posts

ವೇದಿಕೆಯೇರಿ ವಯಲಿನ್ ನುಡಿಸುವುದು ಮಾತ್ರವಲ್ಲ, ಗದ್ದೆ ನಾಟಿಯೂ ಮಾಡಬಲ್ಲೆ ಎಂಬುದನ್ನು ತೋರಿಸಿದ್ದಾರೆ ಧನಶ್ರೀ ಶಬರಾಯ!

ಉಡುಪಿ: ಕರಾವಳಿಯ ಉದಯೋನ್ಮುಖ ಪಿಟೀಲು ವಾದಕಿಯೊಬ್ಬರು ತಾನು ವೇದಿಕೆಯೇರಿ ವಯಲಿನ್ ನುಡಿಸುವುದು ಮಾತ್ರವಲ್ಲ, ಗದ್ದೆ ನಾಟಿಯೂ ಮಾಡಬಲ್ಲೆ ಎಂಬುದನ್ನು ತೋರಿಸಿದ್ದಾರೆ. ಮಂಗಳೂರು ನಿವಾಸಿ 24ರ ಹರೆಯದ ಧನಶ್ರೀ ಶಬರಾಯ ಕಳೆದ 3ದಿನಗಳಿಂದ ಉಡುಪಿಯಲ್ಲಿ ತನ್ನ ಅಜ್ಜಿಮನೆಯ ಗದ್ದೆಗಳಲ್ಲಿ ನಾಟಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಶ್ರೀಪತಿ ಶಬರಾಯ ಮತ್ತು ಶುಭಮಂಗಳಾ ದಂಪತಿಯ ಪುತ್ರಿ ಧನಶ್ರೀ ಮಂಗಳೂರಿನ ಶಾರದಾ ಕಾಲೇಜಿನಲ್ಲಿ ಬಿ.ಕಾಂ. ಪದವಿ ಮುಗಿಸಿ, ಪ್ರಸ್ತುತ ಮಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ವಯಲಿನ್ ವಾದನ ಕಲಾವಿದೆಯಾಗಿ ಬೆಳಕಿಗೆ ಬರುತ್ತಿದ್ದಾರೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನು ಯತಿರಾಜ್ ಮತ್ತು ಪ್ರಸಿದ್ಧ ಕಲಾವಿದೆ ವಿದುಷಿ ಪ್ರಾರ್ಥನಾ ಸಾಯಿನರಸಿಂಹನ್ ಅವರಲ್ಲಿ ಪಡೆದು ಸೀನಿಯರ್ ವರೆಗಿನ ಶಿಕ್ಷಣ ಪೊರೈಸಿದ ಬಳಿಕ ವಯಲಿನ್ ಶಿಕ್ಷಣವನ್ನು ಪ್ರಸಿದ್ಧ ಆಕಾಶವಾಣಿ ಕಲಾವಿದರೂ ಆಗಿರುವ ಗುರು ಟಿ.ಜಿ. ಗೋಪಾಲಕೃಷ್ಣನ್ ಅವರಲ್ಲಿ ಕಲಿತಿದ್ದಾರೆ. ಬಳಿಕ ಹೆಚ್ಚಿನ ಸಾಧನೆಗಾಗಿ ಮೈಸೂರಿನ ಹಿರಿಯ ಸಂಗೀತ ಗುರು ವಿದ್ವಾನ್ ಎಚ್.ಕೆ. ನರಸಿಂಹ ಮೂರ್ತಿ ಅವರಲ್ಲಿ ಪಡೆಯುತ್ತಿದ್ದಾರೆ.


ಈಗಾಗಲೇ ಕರಾವಳಿ ಜಿಲ್ಲೆಗಳ ನೂರಾರು ವೇದಿಕೆಗಳಲ್ಲಿ ಅನೇಕ ಹಿರಿ- ಕಿರಿಯ ಕಲಾವಿದರಿಗೆ ವಯಲಿನ್ ಸಹವಾದನವನ್ನು ಧನಶ್ರೀ ನೀಡುತ್ತಿದ್ದಾರೆ. ಅವರು ಶಿಕ್ಷಣದ ಬಳಿಕ ಯಾವುದೇ ಉದ್ಯೋಗಕ್ಕೆ ಸೇರದೇ ಪಿಟೀಲು ವಾದನವನ್ನೇ ನೆಚ್ಚಿಕೊಂಡಿದ್ದಾರೆ. ಅಲ್ಲದೇ ತನ್ನ ಪ್ರತಿಭೆಯಿಂದ ಕಲಾಸಕ್ತರಿಂದ ಭೇಷ್ ಅನ್ನಿಸಿಕೊಂಡಿದ್ದಾರೆ. ಹಾಗಾಗಿ ಸಂಗೀತ ಕಾರ್ಯಕ್ರಮಗಳಲ್ಲಿ ವಯಲಿನ್ ನುಡಿಸಲು ಸಾಕಷ್ಟು ಬೇಡಿಕೆಯೂ ಇದೆ.
ಉತ್ಸಾಹಿಯಾಗಿರುವ ಧನಶ್ರೀ ಉಡುಪಿಯಲ್ಲಿರುವ ಅಜ್ಜಿ ಮನೆಯಲ್ಲಿ ಮುಂಗಾರಿನಲ್ಲಿ ನಡೆಯುವ ಭತ್ತದ ಕೃಷಿ ಚಟುವಟಿಕೆಯಲ್ಲೂ ಕಳೆದ ಮೂರು ದಿನಗಳಿಂದ ತೊಡಗಿಸಿಕೊಂಡಿದ್ದಾರೆ. ಸೋದರ ಮಾವಂದಿರು ಮತ್ತು ಇತರೆ ಮನೆಮಂದಿಯೆಲ್ಲಾ ಸೇರಿ ಗದ್ದೆ ನಾಟಿ ಕಾರ್ಯ ಮಾಡುವಾಗ, ತಾನೂ ಭತ್ತದ ನೇಜಿಯನ್ನು ತಲೆ ಹೊರೆಯಲ್ಲಿ ತಂದು ಗದ್ದೆಗೆ ಹಾಕುವುದು, ನೇಜಿ ನೆಡುವುದು… ಹೀಗೆ ನಾಟಿ ಕಾರ್ಯದಲ್ಲಿ ಪೂರ್ಣ ಭಾಗಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss