Saturday, July 2, 2022

Latest Posts

ವೇಮಗಲ್-ಕುರಗಲ್ ಪ.ಪಂ.ಅಂತಿಮ ಅಧಿಸೂಚನೆಗೆ 20 ಗ್ರಾಮಗಳ ಗ್ರಾ.ಪಂ ಮಾಜಿ ಅಧ್ಯಕ್ಷ, ಉಪಾಧ್ಯಕ್ಷರಿಂದ ಡಿಸಿಗೆ ಮನವಿ

ಹೊಸ ದಿಗಂತ ವರದಿ, ಕೋಲಾರ:

ವೇಮಗಲ್-ಕುರಗಲ್ ಪಟ್ಟಣ ಪಂಚಾಯಿತಿ ರಚನೆಗೆ ಅಂತಿಮ ಅಧಿಸೂಚನೆ ಹೊರಡಿಸಿ ಶೀಘ್ರ ಅಸ್ಥಿತ್ವಕ್ಕೆ ತರುವಂತೆ ಈ ವ್ಯಾಪ್ತಿಯ 20 ಗ್ರಾಮಗಳ ಹಲವಾರು 1994ರಿಂದೀಚೆಗೆ ಅಧಿಕಾರದಲ್ಲಿದ್ದ ಮಾಜಿ ಗ್ರಾ.ಪಂ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ಪೌರಾಡಳಿತ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ವೇಮಗಲ್, ಕುರಗಲ್ ಗ್ರಾಮ ಪಂಚಾಯಿತಿಗಳ ಎಲ್ಲಾ ಗ್ರಾಮಗಳು, ಚೌಡದೇನಹಳ್ಳಿ ಗ್ರಾಮ ಪಂಚಾಯಿತಿಯ ಕಲ್ವ,ಮಂಜಲಿ,ಚೌಡದೇನಹಳ್ಳಿ ಚಿಕ್ಕವಲ್ಲಬ್ಬಿ, ಬೆಟ್ಟಹೊಸಪುರ ಮತ್ತು ಶೆಟ್ಟಿಹಳ್ಳಿ ಗ್ರಾ.ಪಂನ ಪುರಹಳ್ಳಿ ಸೇರಿದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ 20 ಗ್ರಾಮಗಳ ಮಾಜಿ ಅಧ್ಯಕ್ಷ,ಉಪಾಧ್ಯಕ್ಷರು ಈ ಸಂಬಂಧ ಮನವಿ ಮಾಡಿದ್ದಾರೆ.
ಈ ಭಾಗದ ಬೆಳವಣಿಗೆಯ ವೇಗ ಹೆಚ್ಚುತ್ತಿದೆ, ನಾಲ್ಕು ದಿಕ್ಕುಗಳಲ್ಲೂ ಪ್ರದೇಶ ಬೆಳೆಯುತ್ತಿದೆ ಆದರೆ ಒಂದೊಂದು ದಿಕ್ಕಿನಲ್ಲಿ ಒಂದೊಂದು ಗ್ರಾಮ ಪಂಚಾಯಿತಿ ಇದ್ದರೆ ಅಭಿವೃದ್ದಿಗೆ ಪೂರಕವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
1ನೇ ಹಂತದ ಕೈಗಾರಿಕೆಗಳು 600 ಎಕರೆ ಪ್ರದೇಶದಲ್ಲಿ ತಲೆಯೆತ್ತಿವೆ, ಮತ್ತೆ 2ನೇ ಹಂತದ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ.
ಇಲ್ಲಿ ಕೈಗಾರಿಕಾ ಆಸ್ತಿಯ ತೆರಿಗೆ ಹೆಚ್ಚು ಸಂಗ್ರಹವಾಗಲಿದ್ದು, ಈ ಭಾಗದ  ಎಲ್ಲಾ 20 ಹಳ್ಳಿಗಳ ಸಮಗ್ರ ಅಭಿವೃದ್ದಿಗೂ ಇದು ಹಂಚಿಕೆಯಾಗಲಿದೆ, ಈ ಭಾಗದ ಅಭಿವೃದ್ದಿಯ ದೃಷ್ಟಿಯಿಂದ ಪಟ್ಟಣ ಪಂಚಾಯಿತಿ ರಚನೆ ಒಂದು ಉತ್ತಮ ಬೆಳೆವಣಿಗೆ ಎಂದು ತಿಳಿಸಿದ್ದಾರೆ.
ಭವಿಷ್ಯದಲ್ಲಿ ಇದು ತಾಲ್ಲೂಕಾಗಲೂ ಸಹಕಾರಿ
ಕುರಗಲ್-ವೇಮಗಲ್ ಪಟ್ಟಣ ಪಂಚಾಯತಿಯಾಗುವುದರಿಂದ ಕೋಲಾರ,ಬೆಂಗಳೂರು ನಗರಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ,  ಇದು ಜಿಲ್ಲೆಯ ಏಕೈಕ ಪಟ್ಟಣ ಪಂಚಾಯತಿಯಾಗಿದ್ದು, ಭವಿಷ್ಯದಲ್ಲಿ ಇದು ತಾಲ್ಲೂಕು ಕೇಂದ್ರವಾಗಲೂ ಪಟ್ಟಣಕೇಂದ್ರವಾಗುವುದರಿಂದ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
1967 ರಿಂದ 2008 ರವರೆಗೂ ವೇಮಗಲ್ ವಿಧಾನಸಭಾ ಕ್ಷೇತ್ರವಾಗಿತ್ತು, ಭವಿಷ್ಯದಲ್ಲಿ ಅಭಿವೃದ್ದಿ, ಜನಸಂಖ್ಯೆಗೆ ಅನುಗುಣವಾಗಿ ಮತ್ತೆ ವಿಧಾನಸಭಾ ಕ್ಷೇತ್ರವಾಗಲು ಪಟ್ಟಣ ಪಂಚಾಯಿತಿ ಸಹಕಾರಿಯಾಗಲಿದೆ.
ಬಡವರು,ಸ್ಥಿತಿವಂತರು, ರೈತರು, ಕೂಲಿಕಾರ್ಮಿಕರಿಗೂ ಸೇರಿದಂತೆ ಎಲ್ಲಾ ಹಳ್ಳಿಗಳಿಗೂ ಮೂಲಭೂತ ಸೌಲಭ್ಯಗಳು ಸಿಗುವಂತಾಗಲಿದೆ, ಶೈಕ್ಷಣಿಕ,ಆರ್ಥಿಕ ಅಭಿವೃದ್ದಿ ಜತೆಗೆ ಉದ್ಯೋಗ ಸೃಷ್ಟಿಯೂ ದೊಡ್ಡಪ್ರಮಾಣದಲ್ಲಿ ಆಗಲಿದ್ದು, ಅಭಿವೃದ್ದಿ ದೃಷ್ಟಿಯಿಂದ ಈ ವ್ಯಾಪ್ತಿಯ 20 ಗ್ರಾಮಗಳ ಪ್ರತಿಯೊಬ್ಬರೂ ಪಟ್ಟಣ ಪಂಚಾಯಿತಿ ರಚನೆಯನ್ನು ಸ್ವಾಗತಿಸಬೇಕು ಎಂದು ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿ ಕುರಿತು ತತ್‌ಕ್ಷಣದ ಆಲೋಚನೆ ಬೇಡ, ಭವಿಷ್ಯದಲ್ಲಿನ ಅಭಿವೃದ್ದಿ ಕುರಿತು ಚಿಂತಿಸುವ ಅಗತ್ಯವಿದೆ, ಪಟ್ಟಣ ಪಂಚಾಯಿತಿಯಾಗುವುದರಿಂದ ಕೃಷಿ,ತೋಟಗಾರಿಕೆ, ರೇಷ್ಮೆ,ಹೈನುಗಾರಿಕೆಯಂತಹ ಯಾವ ಚಟುವಟಿಕೆಗಳಿಗೂ ಧಕ್ಕೆಯಾಗದು ಎಂದು ತಿಳಿಸಿರುವ ಅವರು, ಪಟ್ಟಣಗಳ ಅಭಿವೃದ್ದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಕಾರ್ಯಕ್ರಮಗಳನ್ನು ಜನಪ್ರತಿನಿಧಿಗಲು ಅನುಷ್ಟಾನಗೊಳಿಸಿ ಈ ಭಾಗದ ಅಭಿವೃದ್ದಿಗೆ ಸಹಕಾರ ನೀಡಬೇಕಾಗಿದೆ.
ಈ ಎಲ್ಲಾ ಕಾರಣಗಳಿಂದ ಸರ್ಕಾರ ಕೂಡಲೇ ಅಂತಿಮ ಅಧಿಸೂಚನೆ ಹೊರಡಿಸಿ ಪಟ್ಟಣ ಪಂಚಾಯಿತಿ ಅಸ್ಥಿತ್ವಕ್ಕೆ ತರುವಂತೆ ೨೦ ಗ್ರಾಮಗಳ ವ್ಯಾಪ್ತಿಯ 1994ರಿಂದೀಚೆಗಿನ ಗ್ರಾ.ಪಂ ಮಾಜಿ ಅಧ್ಯಕ್ಷರು,ಮಾಜಿ ಉಪಾಧ್ಯಕ್ಷರು, ಮಾಜಿ ಸದಸ್ಯರು ಪೌರಾಡಳಿತ ನಿರ್ದೇಶಕರು,ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss