ವೈದ್ಯಕೀಯ ಸಾಮಾಗ್ರಿಗಳ ಕೊರತೆ ಇಲ್ಲ, ಪರಿಸ್ಥಿತಿ ಎದುರಿಸುವ ಸಾಮರ್ಥ್ಯ ಇದೆ: ಸಚಿವ ಸಿ.ಸಿ.ಪಾಟೀಲ್

0
150

ಗದಗ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ನಿಯಂತ್ರಣ ಕಾರ್ಯಗಳಿಗೆ ಯಾವುದೇ ರೀತಿಯ ಅನುದಾನ ಕೊರತೆ, ವೈದ್ಯಕೀಯ ಸಾಮಗ್ರಿ ಹಾಗೂ ಮಾನವ ಸಂಪನ್ಮೂಲಗಳ ಕೊರತೆ ಇಲ್ಲ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸುವ ಸಾಮರ್ಥ್ಯ ವೈದ್ಯರುಗಳಿಗೆ ಹಾಗೂ ಸಿಬ್ಬಂದಿಗಳಿಗೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಸ್ಥಳೀಯ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಕೋವಿಡ್-19 ಸೋಂಕು ನಿಯಂತ್ರಣ ಕುರಿತ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಲು ಎಲ್ಲ ಮೂರಾರ್ಜಿ ವಸತಿ ಶಾಲೆಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕು ಎಂದು ಎಲ್ಲ ತಹಶೀಲ್ದಾರುಗಳಿಗೆ ಸೂಚಿಸಲಾಗಿದೆ. ಕೊರೋನಾ ಕುರಿತು ಇನ್ನಷ್ಟು ಕ್ರಮಕೈಗೊಳ್ಳಲು ಜಿಲ್ಲಾಡಳಿತ ಭವನದ ಜಿ.ಪಂ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಎಲ್ಲ ಚುನಾಯಿತ ಜನಪ್ರತಿನಿಧಿಗಳ ಹಾಗೂ ಕೋವಿಡ್ ನಿಯಂತ್ರಣ ಸಂಬಂಧಿತ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಹೇಳಿದ ಅವರು ಕೋವಿಡ್-19 ರೋಗ ಚಿಕಿತ್ಸೆಗಾಗಿ ವೈದ್ಯರು ಸಿಬ್ಬಂದಿಗಳು ಬಳಸುವ 16 ಸಾವಿರ ಪಿಪಿಎ ಕಿಟ್, ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಲು ಅಗತ್ಯವಿರುವ 10 ಸಾವಿರ ವಿಟಿಎಂ ಕಿಟ್‌ಗಳು ಹಾಗೂ 15 ಸಾವಿರ ಎನ್-95 ಮಾಸ್ಕ್ ಸಂಗ್ರಹ ಇದ್ದು, ಅಗತ್ಯಕ್ಕನುಸಾರ ಬಳಕೆ ಮಾಡಲಾಗುತ್ತಿದೆ ಎಂದರು.
ಕೋವಿಡ್-19 ಸೋಂಕು ಈಗ ಪ್ರತಿದಿನ 200-250 ವರೆಗೆ ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿದೆ. ಆಸ್ಪತ್ರೆ ಸಾಮರ್ಥ್ಯ ಸಹ ಸೋಂಕಿತರ ಸಂಖ್ಯೆ ಅನುಗುಣವಾಗಿ ಹೆಚ್ಚಿಸಲಾಗುವುದು. ನಗರದ ಈಗಿರುವ 200 ಬೆಡ್ ಸಾಮರ್ಥ್ಯದ ಹೆರಿಗೆ ಆಸ್ಪತ್ರೆಯನ್ನು ತೀರಾ ಅಗತ್ಯವಿದ್ದಲ್ಲಿ ಕೋವಿಡ್-19 ಆಸ್ಪತ್ರೆಯಾಗಿ ಮಾರ್ಪಡಿಸಲಾಗುವುದು. ಅಲ್ಲದೇ ಖಾಸಗಿ ಆಸ್ಪತ್ರೆಗಳಿಂದ ಜಿಲ್ಲೆಯಲ್ಲಿ 150-200 ಬೆಡ್‌ಗಳಿರುವ ಆಸ್ಪತ್ರೆ ಪಡೆಯಲು ಸಹ ಜಿಲ್ಲಾಡಳಿತ ಕ್ರಮ ಆರಂಭಿಸಿದೆ ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಈಗಾಗಲೇ ಜಿಲ್ಲಾಡಳಿತ ಜಿಲ್ಲೆಯ 30 ಕೇಂದ್ರಗಳಲ್ಲಿ 1315 ಬೆಡ್‌ಗಳನ್ನು ಗುರುತಿಸಿದೆ. ಪರಿಸ್ಥಿತಿಗನುಗುಣವಾಗಿ ಮೊರಾರ್ಜಿ ಶಾಲೆಗಳಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯದ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಕೋವಿಡ್-19 ರೋಗಿಗಳೆಗೆ ಉತ್ತಮ ಚಿಕಿತ್ಸೆ ಜೊತೆಗೆ ಉತ್ತಮ ಆಹಾರ ನೀಡಬೇಕು. ನಿರ್ಲಕ್ಷ್ಯ ತೋರಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು. ರಾಜ್ಯಾದ್ಯಂತ ಜಿಲ್ಲಾವಾರು ಮನೆ ಮನೆಗೆ ಆರೋಗ್ಯ ಸಮೀಕ್ಷೆ ನಡೆಯುತ್ತಿದ್ದು, ಅದರಲ್ಲಿ ಜಿಲ್ಲೆಯು ನಾಲ್ಕನೆ ಸ್ಥಾನದಲ್ಲಿದೆ ಎಂದರು.
ಕೊರೋನಾ ಸಂಕಷ್ಟದ ಸಮಯದಲ್ಲಿ ರಾಜಕಾರಣ ಮಾಡಬಾರದು. ಕೇಂದ್ರದಿಂದ ಹಣಕಾಸಿನ ನೆರವು ಬರದಿದ್ದರೂ ಯಾವ ಕೆಲಸಗಳನ್ನು ನಿಲ್ಲಿಸಿಲ್ಲ ಕೇಂದ್ರ ಸರಕಾರ ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸುತ್ತ ಬಂದಿದೆ ಎಂದು ಶಾಸಕ ಎಚ್.ಕೆ.ಪಾಟೀಲ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್ ಎನ್,ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here