ಮಂಗಳೂರು: ಕೊರೋನಾ ಮಹಾಮಾರಿ ಈಗ ವೈದ್ಯ ಲೋಕವನ್ನೂ ತಲ್ಲಣಗೊಳಿಸುತ್ತಿದೆ. ಮಂಗಳೂರಿನಲ್ಲಿ ಗುರುವಾರ ಐದು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ನಗರದ ಜನತೆಯ ಆತಂಕಕ್ಕೆ ಕಾರಣವಾಗಿದೆ. ಸೋಂಕಿನಿಂದಾಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗುವ ಸ್ಥಿತಿ ನಿರ್ಮಾಣವಾಗಿದೆ.
ಸೋಂಕಿತ ಐದು ಮಂದಿ ವೈದ್ಯರು ನಗರದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದವರಾಗಿದ್ದಾರೆ. 28ರ ಹರೆಯದ ಯುವ ವೈದ್ಯ, 28 ವರ್ಷದ ಇಬ್ಬರು ವೈದ್ಯೆಯರು ಹಾಗೂ 27 ವರ್ಷದ ಇಬ್ಬರು ವೈದ್ಯೆಯರಿಗೆ ಕೋವಿಡ್ 19 ಬಾಧಿಸಿದೆ ಎನ್ನಲಾಗಿದೆ. ಈ ಪೈಕಿ ಒಬ್ಬರು ವೈದ್ಯರು ಖಾಸಗಿ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದು, ವೈದ್ಯರಿಗೆ ಸೋಂಕು ಬಂದ ಕಾರಣ ಈಗ ಆ ಅಪಾರ್ಟ್ಮೆಂಟ್ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇರಿಸಿದೆ.
ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೋವಿಡ್ ಸೋಂಕು ಅಲ್ಲಿಗೆ ಬಂದ ರೋಗಿಯೊಬ್ಬನಿಂದಲೇ ಹರಡಿದೆ ಎನ್ನಲಾಗುತ್ತಿದೆ. ರೋಗಿಗೆ ಕೊರೋನಾ ಪಾಸಿಟಿವ್ ಕಂಡು ಬಂದ ಬಳಿಕ ವೈದ್ಯರಿಗೂ ಸೋಂಕು ಕಾಣಿಸಿರುವುದು ಇದಕ್ಕೆ ಕಾರಣವಾಗಿದೆ.
ಐದು ಮಂದಿ ವೈದ್ಯರಿಗೆ ಕೊರೋನಾ ಸೋಂಕು ಬಂದಿರುವುದನ್ನು ಆರೋಗ್ಯ ಇಲಾಖೆ ದೃಡಪಡಿಸಿದೆ. ಸೋಂಕು ಕಂಡು ಬಂದ ಮಾತ್ರಕ್ಕೆ ಯಾರೂ ಕೂಡ ಭಯಪಡುವ ಅಗತ್ಯವಿಲ್ಲ. ಸೋಂಕಿತ ವೈದ್ಯರಿಗೆ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಸೋಂಕಿನ ಮೂಲ ಪತ್ತೆಗೂ ಕ್ರಮ ವಹಿಸಲಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.