ಹೊಸದಿಗಂತ ಆನ್ಲೈನ್ ಡೆಸ್ಕ್:
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಆನ್ಲೈನ್ ದೈತ್ಯ ಗೂಗಲ್ ತನ್ನ ಪ್ಲೇ ಸ್ಟೋರ್ನಿಂದ ಹಲವು ಆಪ್ಗಳನ್ನು ಅಳಿಸಿಹಾಕಿದ್ದು, ಈ Appಗಳು ಬಳಕೆದಾರರ ಸುರಕ್ಷತಾ ನೀತಿಗಳನ್ನು ಉಲ್ಲಂಘಿಸುತ್ತಿರುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ.
ಪ್ಲೇಸ್ಟೋರ್ನಿಂದ ಹೊರಬಿದ್ದಿರುವ Appಗಳಲ್ಲಿ ಬಹುತೇಕ Appಗಳು ವೈಯಕ್ತಿಕ ಸಾಲ ಅಪ್ಲಿಕೇಶನ್ಗಳು ಎಂಬುದು ಗಮನಾರ್ಹ. ಆದರೆ ಗೂಗಲ್ ಯಾವೆಲ್ಲ App ಮೇಲೆ ಕ್ರಮ ಕೈಗೊಂಡಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಆನ್ಲೈನ್ ಸಾಲ ನೀಡಿಕೆಗೆ ಸಂಬಂಧಿಸಿದಂತೆ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ಸಾಲ ನೀಡಿಕೆಯನ್ನು ಕ್ರಮಬದ್ಧಗೊಳಿಸಬೇಕು, ಹೀಗಾಗಿ ನಿಯಂತ್ರಕ ಕ್ರಮಗಳನ್ನು ಸೂಚಿಸಲು ಕಾರ್ಯಕಾರಿ ಸಮಿತಿಯೊಂದನ್ನು ರಚಿಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ಪ್ರಕಟಿಸಿತ್ತು. ಅಲ್ಲದೆ ಇದಕ್ಕೂ ಮುನ್ನ ಅನಧಿಕೃತ ಡಿಜಿಟಲ್ ಸಾಲ ನೀಡುವ ವೇದಿಕೆಗಳು, ಮೊಬೈಲ್ Appಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಇದಕ್ಕೆ ಬಲಿಯಾಗದಂತೆ ಕೂಡಾ ಅದು ಎಚ್ಚರಿಸಿತ್ತು. ಇದರ ಬೆನ್ನಿಗೇ ಗೂಗಲ್ ಈ ಕ್ರಮಕ್ಕೆ ಮುಂದಾಗಿರುವುದು ಹೊಸ ಬೆಳವಣಿಗೆಯಾಗಿದೆ.