ವೈರಸ್ ಹಬ್ಬಲು ಕೇವಲ 10 ನಿಮಿಷ ಸಾಕು!

0
1420

ಕೊರೋನಾ ವೈರಸ್‌ನಿಂದ ಒಬ್ಬ ಸೋಂಕಿತನಿಂದ ಮತ್ತೊಬ್ಬ ಆರೋಗ್ಯವಂತನಿಗೆ ಹಬ್ಬಲು ಎಷ್ಟು ಸಮಯ ಸಾಕು? ಸಂಶೋಧನೆಯೊಂದರ ಪ್ರಕಾರ ಕೇವಲ ಹತ್ತು ನಿಮಿಷ ಸಾಕು.

ಸೀನುವುದರಿಂದ ಮತ್ತು ಕೆಮ್ಮುವುದರಿಂದ ಕೊರೋನಾವೈರಸ್ ಸೋಂಕಿತ ವ್ಯಕ್ತಿಯಿಂದ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಮಾತನಾಡುವಾಗ ಮತ್ತು ಜೋರಾಗಿ ಉಸಿರಾಡುವುದರಿಂದಲೂ ವೈರಸ್‌ಗಳು ಹೊರಗೆ ಬರುತ್ತವೆ. ಇದರ ಜತೆಗೇ ಕೆಲವರಿಗೆ ಉಗುಳುವ ಅಭ್ಯಾಸ ಇರುವುದರಿಂದ ಆಗಲೂ ವೈರಸ್‌ಗಳು ಹೊರಗೆ ಬರುತ್ತವೆ.

ಇಂತಹ ವ್ಯಕ್ತಿಗಳ ತೀರಾ ಸಮೀಪಕ್ಕೆ ಆರೋಗ್ಯವಂತ ವ್ಯಕ್ತಿಯೊಬ್ಬ ಬಂದರೆ ಕೇವಲ 10 ನಿಮಿಷಗಳಲ್ಲೇ ಆತನಿಗೆ ವೈರಾಣು ಹರಡುತ್ತದೆ ಎಂದು ಮೆಸಾಚುಸೆಟ್ಸ್ ವಿಶ್ವವಿದ್ಯಾಲಯವೊಂದರ ತಜ್ಞ ಎರಿನ್ ಬ್ರೋಮೇಜ್ ಎನ್ನುವವರು ಹೇಳುತ್ತಾರೆ.

ಸೋಂಕಿತ ವ್ಯಕ್ತಿಯ ಜತೆ ಮಾತನಾಡುವಾಗ ಬರಿಯ ಉಸಿರಾಟ ಮತ್ತು ಮಾತಿನಿಂದಲೆ ಸೋಂಕು ಹರಡುವ ಸಾಧ್ಯತೆಗಳಿರುತ್ತವೆ. ಬರಿಯ ಉಸಿರಾಟವೇ 50,000 ದಷ್ಟು ಕಣಗಳನ್ನು ಮತ್ತು ಏರೋಸಾಲ್‌ಗಳನ್ನು ವಾತಾವರಣಕ್ಕೆ ಬಿಡುತ್ತದೆ. ಸಾಮಾನ್ಯ ವಾತಾವರಣದಲ್ಲಿ ಇವೆಲ್ಲವೂ ಕೂಡಲೇ ಭೂಮಿಗೆ ಬೀಳುತ್ತವೆ. ಕೆಲವು ಸ್ವಲ್ಪ ಕಾಲ ಗಾಳಿಯಲ್ಲಿರುತ್ತವೆ. ಸೋಂಕಿತ ವ್ಯಕ್ತಿಯೊಬ್ಬನ ಉಸಿರಾಟ ಮಾತ್ರದಿಂದಲೇ ಎಷ್ಟು ವೈರಾಣುಗಳು ಗಾಳಿಗೆ ಬಿಡಲ್ಪಡುತ್ತದೆ ಎಂಬ ಖಚಿತ ಲೆಕ್ಕವಿಲ್ಲವಾದರೂ ಗಣನೀಯ ಪ್ರಮಾಣದಲ್ಲೇ ಬಿಡುಗಡೆಯಾಗುತ್ತವೆ ಎಂದು ಹೇಳಲಾಗಿದೆ. ನಿಮಿಷಕ್ಕೆ ಕೇವಲ 20 ವೈರಾಣುಗಳು ಹೊರಗೆ ಬಂದವು ಎಂದುಕೊಂಡರೂ 50 ನಿಮಿಷದಲ್ಲಿ ಆರೋಗ್ಯಪೂರ್ಣ ವ್ಯಕ್ತಿಯೊಬ್ಬ ವೈರಾಣು ಸೋಂಕಿಗೆ ಬಲಿಯಾಗಲು ಸಾಕಾಗುತ್ತದೆ ಎಂದು ಬ್ರೋಮೇಜ್ ಹೇಳುತ್ತಾರೆ.

ಒಂದು ವೇಳೆ ಸೋಂಕಿತ ವ್ಯಕ್ತಿಯು ಯಾರೊಂದಿಗಾದರೂ ಮಾತನಾಡುತ್ತಿದ್ದರೆ ಮಾತನಾಡುವಾಗ ಹತ್ತು ಪಟ್ಟು ಹೆಚ್ಚು ವೈರಾಣುಗಳು ವಾತಾವರಣಕ್ಕೆ ಬಿಡಲ್ಪಡುತ್ತವೆ. ಆಗ ಕೆಲವೇ 5-10 ನಿಮಿಷಗಳಲ್ಲೇ ವ್ಯಕ್ತಿಯೊಬ್ಬ ಸೋಂಕು ಪಡೆಯುತ್ತಾನೆ. ಕೋವಿಡ್ -19 ವೈರಾಣುಗಳು ಗಾಳಿಯಲ್ಲಿ 14 ನಿಮಿಷಗಳ ಕಾಲ ಉಳಿಯುತ್ತವೆ ಎಂದು ಕಂಡುಬಂದಿರುವುದರಿಂದ ಸೋಂಕು ಪಡೆಯುವ ಸಾಧ್ಯತೆಗಳು ಹೆಚ್ಚೇ ಆಗಿರುತ್ತವೆ.

ಆದ್ದರಿಂದ ಸೋಂಕಿತ ವ್ಯಕ್ತಿಯೊಂದಿಗೆ 10 ನಿಮಿಷಕ್ಕಿಂತ ಹೆಚ್ಚು ಕಾಲ ಕಳೆದುದಾದರೆ ಆರೋಗ್ಯವಂತ ವ್ಯಕ್ತಿಗೆ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಿರುತ್ತದೆ ಎಂದು ಬ್ರೋಮೇಜ್ ನುಡಿಯುತ್ತಾರೆ.

ಈಗ ತಿಳಿಯಿತೆ, ವೈರಾಣುವಿನಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿಯೆ ಉಳಿಯುವುದು ಏಕೆ ಉತ್ತಮವೆಂದು.

LEAVE A REPLY

Please enter your comment!
Please enter your name here