Thursday, July 7, 2022

Latest Posts

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಿಸಿಎಂ ಕಾರಜೋಳ

ಹೊಸದಿಗಂತ ವರದಿ, ಬಾಗಲಕೋಟೆ:

ಮಾನವ ಕಲ್ಯಾಣಕ್ಕಾಗಿ ವ್ಯಸನಮುಕ್ತ ಸಮಾಜ ನಿರ್ಮಾಣ ಅಗತ್ಯವಾಗಿದ್ದು, ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳಿ ಹೇಳಿದರು.
ನಗರದ ಬಿವಿವ ಸಂಘದ ನೂತನ ಸಭಾಭವನದಲ್ಲಿಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಹಮ್ಮಿಕೊಂಡ ರಾಜ್ಯ ಸಂಯಮ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಅವರು ಪಾಶ್ಚಾತ್ಯ ಸಂಸ್ಕøತಿಗೆ ಮಾರು ಹೋಗಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರಿಂದ ಹೊರಬರುವಂತೆ ಮಾಡುವಲ್ಲಿ ಮಠಾಧೀಶರು ಕೈಗೊಂಡ ಕಾರ್ಯ ದೊಡ್ಡದು ಎಂದರು.
ಸಮಾಜದಲ್ಲಿ ಲಿಂಗಬೇದ, ಮೇಲು-ಕೀಳು ಎಂಬುದನ್ನು ತೊಡೆದು ಹಾಕಲು 12ನೇ ಶತಮಾನದಿಂದಲೂ ಬಸವಾದಿ ಶರಣರು ಮಾಡುತ್ತಾ ಬಂದಿದ್ದಾರೆ. ಕಾರ್ಯಕ ಜೀವಿಗಳು, ಕೆಳವರ್ಗದವರನ್ನು ಪರಿವರ್ತನೆ ಮಾಡಲು ಬಸವಣ್ಣನವರು ಹೊಸ ಧರ್ಮವನ್ನೇ ಹುಟ್ಟು ಹಾಕಿದರು. ಈ ಪ್ರಯತ್ನ ನಿರಂತರವಾಗಿ ನಡೆಯುತ್ತ ಬಂದಿದೆ. ಅವರ ಮಾರ್ಗದಲ್ಲಿ ವಿಜಯ ಮಹಾಂತ ಶ್ರೀಗಳು ನಡೆಯುತ್ತಿದ್ದು, ಮಹಾಂತ ಜೋಳಿಗೆಯಿಂದ ದುಶ್ಚಟಗಳನ್ನು ತಮ್ಮ ಜೋಳಿಗೆ ಹಾಕಿಸಿಕೊಳ್ಳುವ ಮೂಲಕ ಸುಂದರ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದಾರೆ ಎಂದರು.
ವ್ಯಸನ ಮುಕ್ತ ಸಮಾಜ ನಿರ್ಮಾಣದ ಕಾರ್ಯವನ್ನು ಅವರ ಉತ್ತರಾಧಿಕಾರಿಗಳಾದ ಗುರುಮಹಾಂತ ಶ್ರೀಗಳು ಮುಂದುವರಿಸಿಕೊಂಡು ಬಂದಿದ್ದು, ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ವ್ಯಸನದಿಂದ ಮುಕ್ತರನ್ನಾಗಿ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಇವರ ಈ ಕಾರ್ಯವನ್ನು ಕಂಡು ಸರಕಾರ ರಾಜ್ಯ ಸಂಯಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ತಿಳಿಸಿದರು.
ಪ್ರಶಸ್ತಿ ಸ್ವೀಕರಿದ ಇಲಕಲ್ಲಿನ ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳು ಮಾತನಾಡಿ ಎಲೆ ಮರೆ ಕಾಯಕದಂತೆ ಮಹಾಂತ ಜೋಳಿಗೆಯನ್ನು ಹಿಡಿದು ದುಶ್ಚಟಗಳನ್ನು ಜೋಳಿಗೆ ಹಾಕಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದು, ಈ ಸಂಯಮ ಪ್ರಶಸ್ತಿಯಿಂದ ಒಂದು ಕಡೆ ಸಂತೋಷವಾದರೆ ಇನ್ನೊಂದು ಕಡೆ ಜವಾಬ್ದಾರಿ ಹೆಚ್ಚಿಗೆ ಬಂದಂತಾಗಿದೆ. ಮಹಾಂತ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತಿದ್ದು, ಶರಣ ಸಿದ್ದಾಂತ ವಿದ್ಯಾಪೀಠ ಮತ್ತು ಮಹಾಂತ ಜೋಳಿಗೆಯಿಂದ ಉತ್ತಮ ಸಮಾಜ ನಿರ್ಮಾಣ ನಮ್ಮ ಗುರಿಯಾಗಿದೆ ಎಂದರು.
ಜೋಳಿಗೆ ಹಾಕಿ ಹೊರಟಲ್ಲಿ ಅನೇಕ ಅನುಭವಗಳು ಆಗುತ್ತಿದ್ದವು. ಈ ಜೋಳಿಗೆಯಿಂದ ಲಕ್ಷಾಂತರ ಜನ ದುಶ್ಚಟಗಳಿಂದ ಮುಕ್ತರಾಗಿದ್ದಾರೆ. ಜೋಳಿಗೆಯನ್ನು ಮುಟ್ಟಿದರೆ ದುಶ್ಚಟಗಳಿಂದ ಮುಕ್ತನಾಗುತ್ತಾನೆ. ಅಷ್ಟೊಂದು ಭಕ್ತಿ ಆ ಜೋಳಿಗೆ ಇದೆ. ಈ ಪ್ರಶಸ್ತಿ ಜೋಳಿಗೆಗೆ ಹಾಕಿದವರಿಗೂ ಸಲ್ಲುತ್ತದೆ ಎಂದು ತಿಳಿಸಿದರು. ಇಲಕಲ್ಲನ ಆಯುರ್ವೇದ ಆಸ್ಪತ್ರೆಯಲ್ಲಿ ವ್ಯಸನ ಮುಕ್ತ ಕೇಂದ್ರ ಸ್ಥಾಪನೆಯಾಗಬೇಕು. ಅಲ್ಲಿ ಊಟದೊಂದು ಚಿಕಿತ್ಸೆ ನೀಡುವ ಕಾರ್ಯವಾಗಬೇಕು ಎಂದರು. ತಮಗೆ ದೊರೆತ ಪ್ರಶಸ್ತಿ ಮೊತ್ತ 1 ಲಕ್ಷ ರೂ.ಗಳನ್ನು ಈ ಕೇಂದ್ರಕ್ಕೆ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ ಸಮಾಜದಲ್ಲಿ ಉತ್ತಮ ವಾತಾವರಣ ಸೃಷ್ಠಿಯಾಗಬೇಕು. ಮೊದಲು ನಮ್ಮನ್ನು ನಾವು ತಿದ್ದಿಕೊಳ್ಳಬೇಕು. ಇನ್ನೊಬ್ಬರನ್ನು ಗೌರವಿಸುವ ಕಾರ್ಯವಾಗಬೇಕು. ಕೇವಲ ಮಠಾಧೀಶರಿಂದ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುವದಿಲ್ಲ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಾಧ್ಯವೆಂದರು. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ ವ್ಯಸನ ಮುಕ್ತ ಸಮಾಜ ನಿರ್ಮಿಸುವಲ್ಲಿ ಮಠಾಧೀಶರ ಕಾರ್ಯ ದೊಡ್ಡದಾಗಿದೆ ಎಂದರು. ನಿಡಸೋಸಿ ಮಠದ ಶಿವಲಿಂಗೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದ ಹನಮಂತ ಕೊಟಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿರೂರಿನ ಬಸವಲಿಂಗ ಶ್ರೀ, ಲಿಂಗಸೂರಿನ ಸಿದ್ದಲಿಂಗ ಶ್ರೀ, ಗುಳೇದಗುಡ್ಡದ ಗುರುಬಸವ ದೇವರ, ಜಮಖಂಡಿ ಹುನ್ನೂರಿನ ಈಶ್ವರ ಮಂಟೂರ ಸಾನಿಧ್ಯ ವಹಿಸಿದ್ದರು. ಪ್ರಾರಂಭದಲ್ಲಿ ಸಂಯಮ ಮಂಡಳಿಯ ಕಾರ್ಯದರ್ಶಿ ಎಸ್.ಶಂಕರಪ್ಪ ಸ್ವಾಗತಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss