ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸದಿಗಂತ ವರದಿ, ಮಂಡ್ಯ:
ಜನತಾ ಕರ್ಪ್ಯೂ ಸಮಯದಲ್ಲಿ ವ್ಯಾಪಾರವಿಲ್ಲದೆ ನಷ್ಟ ಅನುಭವಿಸುತ್ತಿರುವ ವರ್ತಕರಿಗೆ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿರುವ ಬಗ್ಗೆ ವರ್ತಕ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸರ್ಕಾರದ ಮಾರ್ಗಸೂಚಿಯಲ್ಲಿ ಅವಶ್ಯಕ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಸಮಯ ನಿಗದಿಪಡಿಸಿದೆ. ಈ ಸಮಯದಲ್ಲಿ ಬಾಗಿಲು ತೆರೆದು ವ್ಯಾಪಾರಕ್ಕಿಳಿದಿರುವ ವರ್ತಕರು, ವ್ಯಾಪಾರಿಗಳು, ಅಂಗಡಿ ಮಾಲೀಕರನ್ನು ಟಾರ್ಗೆಟ್ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಿಗದಿತ ಸಮಯ ಮುಗಿದ ನಂತರ ಅಂಗಡಿ ಬಾಗಿಲು ಮುಚ್ಚುವುದು 5 ರಿಂದ 10 ನಿಮಿಷ ವಿಳಂಬವಾದರೂ ಅದನ್ನು ಪೊಲೀಸ್ ಅಧಿಕಾರಿಗಳು ಕಾನ್ಸ್ಟೇಬಲ್ ಮೂಲಕ ವಿಡಿಯೋ ಮಾಡಿಸುತ್ತಾರೆ. ನಂತರ ಕೇಸ್ ಹಾಕುವುದಾಗಿ ಹೆದರಿಸಿ ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ಹಲವು ವರ್ತಕರು ಆರೋಪಿಸಿದ್ದಾರೆ.
ಅವಶ್ಯಕ ವಸ್ತುಗಳ ಖರೀದಿಗೆ ಬಂದವರಿಗೆ ಅರ್ಧ ಪದಾರ್ಥಗಳನ್ನು ಕೊಟ್ಟಿರಲಾಗಿರುತ್ತದೆ, ಇಲ್ಲವೇ ಹೊರಗಿಟ್ಟಿರುವ ಪದಾರ್ಥಗಳನ್ನು ಅಂಗಡಿಯೊಳಗೆ ಇಡುವುದು ತಡವಾಗಿರುತ್ತದೆ. ತುರ್ತಾಗಿ ಜನರು ಏನೋ ಪದಾರ್ಥಗಳನ್ನು ಕೊಳ್ಳುವವರಿರುತ್ತಾರೆ. ಆ ಸಮಯದಲ್ಲಿ ಸ್ವಲ್ಪ ವಿಳಂಬವಾಗಬಹುದು. ಉದ್ದೇಶಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ತೆರೆದಿರುವುದಿಲ್ಲ. ಇಂತಹ ಪರಿಸ್ಥಿತಿಗಳ ಲಾಭ ಪಡೆಯುವುದಕ್ಕೆ ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.