ಶಂಕಿತರು ಮನೆ ಬಿಟ್ಟು ಹೊರ ಬಂದೀರಿ ಜೋಕೆ

0
81

ಬೆಂಗಳೂರು: ಮನೆಯಲ್ಲಿ ಪ್ರತ್ಯೇಕವಾಗಿರುವ ಕೊರೋನಾ ಶಂಕಿತರು ಯಾವುದೇ ಕಾರಣಕ್ಕೂ ವೈದ್ಯಕೀಯ ಮಾರ್ಗಸೂಚಿ ಉಲ್ಲಂಘಿಸುವಂತಿಲ್ಲ. ಹಾಗೊಂದು ವೇಳೆ ಉಲ್ಲಂಘಿಸಿದ್ದೇ ಆದಲ್ಲಿ ಐಪಿಸಿ ಸೆಕ್ಷನ್ 271 ರ ಅನ್ವಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಾರ್ವಜನಿಕತದ ದೃಷ್ಟಿಯಿಂದ ಮನೆ ಬಿಟ್ಟು ಹೊರಬಾರದಂತೆ ಸೂಚಿಸಿದ್ದರೂ ನಿಯಮ ಮೀರಿ ಹೊರಬರುವುದು, ಸಾರ್ವಜನಿಕ ಸಂಪರ್ಕ ದಲ್ಲಿರುವುದು, ಊರಿಂದ ಊರಿಗೆ ಪ್ರಯಾಣಿಸಿದ ಕೊರೋನಾ ಶಂಕಿತರ ವಿರುದ್ಧ ಸರ್ಕಾರ ಕಟ್ಟಿನಿಟ್ಟಿನ ಕ್ರಮಕ್ಕೆ ಮುಂದಾಗ ಬೇಕಾಗುತ್ತದೆ ಎಂದರು.

ದೇಶದಿಂದ ಬಂದವರು ಹಾಗೂ ಅವರ ಸಂಪರ್ಕದಲ್ಲಿದ್ದವರು ಮತ್ತು ಕೊರೋನಾ ಲಕ್ಷಣಗಳು ಕಂಡುಬಂದವರನ್ನು ಎ, ಬಿ, ಸಿ ವರ್ಗೀಕರಿಸಿ, ಮೊಹರು (ಸ್ಟ್ಯಾಂಪಿಂಗ್) ಹಾಕಿ ಪ್ರತ್ಯೇಕ ನಿಗಾದಲ್ಲಿ ಇಡಲಾಗಿದೆ.

ಕೊರೋನಾಬಾದಿತರನ್ನು ಎ ವರ್ಗದಡಿ ಆಸ್ಪತ್ರೆ ಗಳಲ್ಲಿಯೇ ಪ್ರತ್ಯೇಕ ನಿಗಾದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಬಿ ವರ್ಗದಡಿ ಬರುವವರನ್ನು ವೈದ್ಯಕೀಯ ಕಾಲೇಜು, ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ, ಹೊಟೇಲ್ ಸೇರಿದಂತೆ ನಿಗದಿತ ಆವರಣದಲ್ಲಿ ಪ್ರತ್ಯೇಕವಾಗಿ ಇಡಲಾಗುತ್ತದೆ. ಇದಕ್ಕಾಗಿ ಹೊಟೇಲ್, ರೆಸಾರ್ಟ್‌ಗಳನ್ನೂ ಸರ್ಕಾರದ ಸ್ವಾಧೀನಕ್ಕೆ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇನ್ನುಳಿದವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಲು ಸೂಚಿಸಲಾಗಿದೆ. ಇವರನ್ನು ಸಿ ವರ್ಗದಡಿ ಸೇರಿಸಿದ್ದು, ಗೃಹನಿರ್ಬಂಧವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ, ಸಿ ವರ್ಗದಲ್ಲಿರುವ ಶಂಕತರನ್ನು ಬಿ ವರ್ಗದಡಿ ಪರಿಗಣಿಸಿ, ಮನೆಯಿಂದ ಬೇರೆಡೆಗೆ ಸ್ಥಳಾಂತರಿಸಬೇಕಾಗುತ್ತದೆ ಎಂದೂ ಸ್ಪಷ್ಟಪಡಿಸಿದರು.

ಸಿಬ್ಬಂದಿಯಿಂದ ಮನೆ-ಮನೆ ಭೇಟಿ: ಮನೆಯಲ್ಲಿ ಪ್ರತ್ಯೇಕವಾಗಿರುವವರನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಪೊಲೀಸರು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಸಮೀಕ್ಷೆ ಕೈಗೊಳ್ಳುವ ಮೂಲಕ ಪ್ರತ್ಯೇಕ ನಿಗಾದಲ್ಲಿರುವವ ಆರೋಗ್ಯ ಲಕ್ಷಣಗಳನ್ನು ಗುರುತಿಸಲಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿಗೆ ಕೊರೋನಾ ಶಂಕಿತರು ಸಹಕರಿಸಬೇಕು.

ಹಲವೆಡೆ ಗೃಹನಿರ್ಬಂಧದಲ್ಲಿದ್ದವರು ಸಾರ್ವಜನಿಕ ಸಂಪರ್ಕ ಸಾಧಿಸಿರುವುದು ಕಂಡುಬಂದಿದೆಯಲ್ಲದೆ, ಪ್ರಯಾಣ ಮಾಡಿದ ಪ್ರಕರಣಗಳೂ ಇದೆ. ಇದರಿಂದ ಸಾರ್ವಜನಿಕ ಸ್ವಾಸ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯಲ್ಲಿ ಪ್ರತ್ಯೇಕವಾಗಿರುವವರು ಹೇಗಿರಬೇಕು ಎಂಬಿತ್ಯಾದಿ ಮಾತಿಯುಳ್ಳ ಕರಪತ್ರ ಹಂಚಿ, ಜಗೃತಿ ಮೂಡಿಸಲಾಗುತ್ತದೆ. ಮನೆಯ ಬಾಗಿಲು ಅಥವಾ ಗೋಡೆ ಮೇಲೆ ಶಂಕಿತರು ಪ್ರತ್ಯೇಕವಾಗಿರಬೇಕಾದ ದಿನಾಂಕ, ಹೊರಗೆ ಬಾರದಂತೆ ಸೂಚನಾಪತ್ರ (ನೋಟಿಸ್) ಅಂಟಿಸಲಾಗುತ್ತದೆ. ರಾತ್ರಿ ಪಾಳಿಯಲ್ಲೂ ಪೊಲೀಸರು ಇವರ ಮೇಲೆ ನಿಗಾ ಇಟ್ಟಿರುತ್ತಾರೆ. ಇದೆಲ್ಲವನ್ನೂ ಮೀರಿ ವರ್ತಿಸಿದರೆ, ಭಾರತೀಯ ದಂಡ ಸಂತೆ ಸೆಕ್ಷನ್ 271 ಅನ್ವಯ ಪ್ರಕರಣ ದಾಖಲಿಸಿಕೊಳ್ಳಬೇಕಾಗುತ್ತದೆ.

ಮಾ.31 ರವರೆಗೆ ನಿಷೇಧಾಜ್ಞೆ: ಕೊರೋನಾಬಾದಿತ 9 ಜಿಲ್ಲೆಗಳಲ್ಲಿ ಮಾ.31 ರವರೆಗೆ ನಿಷೇಧಾe ಮುಂದುವರಿಸಲು ತೀರ್ಮಾನಿಸಿದ್ದು, ಅಗತ್ಯವಲ್ಲದ ವಸ್ತುಗಳ ಮಾರಾಟಕ್ಕಾಗಿ ಅಂಗಡಿ-ಮುಂಗಟ್ಟುಗಳು ತೆರೆಯುವಂತಿಲ್ಲ. ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಇರಲಿದೆ. ಇದನ್ನು ಮೀರಿ ವ್ಯಾಪಾರ – ವವಾಟು ನಡೆಸಿದರೆ, ಕ್ರಮ ಜರುಗಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.

LEAVE A REPLY

Please enter your comment!
Please enter your name here