ಹೊಸ ದಿಗಂತ ವರದಿ, ಶಿವಮೊಗ್ಗ :
ಕನ್ನಡ ನಾಡಿನಲ್ಲೇ ಹುಟ್ಟಿ ಇಲ್ಲಿನ ಸಂಸ್ಕೃತಿ, ಜೀವನ ಶೈಲಿಯನ್ನು ಕರಗತ ಮಾಡಿಕೊಂಡು ಶತಮಾನಗಳಿಂದ ಬದುಕುತ್ತಿರುವ ಕನ್ನಡ ಮರಾಠನ್ನು ಕೆಲ ಸಂಘಟನೆಗಳು ಅವಹೇಳನ ಮಾಡುವುದು ಸರಿಯಲ್ಲ ಎಂದು ಗ್ರಾಮಾಂತರ ಕನ್ನಡ ಮರಾಠ ಸಮಾಜದ ಬಾಳೋಜಿ ಕೃಷ್ಣೋಜೀರಾವ್ ಮಲ್ಲಪುರ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯುರಪ್ಪನವರು ಮರಾಠ ನಿಗಮ ಸ್ಥಾಪನೆ ಮಾಡಿದ್ದಾರೆಂಬ ಕಾರಣಕ್ಕೆ ಇಡೀ ಮರಾಠ ಸಮಾಜವನ್ನು ಹೀಗಳೆಯಲಾಗುತ್ತಿದೆ. ಅದರೆ ಕನ್ನಡಿಗರು ಹಾಗೂ ಮರಾಠರಿಗೆ ಯಾವ ರೀತಿಯ ಸಂಬಂಧ ಇತ್ತೆಂಬುದನ್ನು ಇತಿಹಾಸ ಹೇಳುತ್ತದೆ ಎಂದರು.
ಕನ್ನಡದ ಮಣ್ಣಲ್ಲೆ ಹುಟ್ಟಿ ಬೆಳೆದು ಕನ್ನಡದ ಮಣ್ಣಿಗೆ ಚಿರ ಋಣಿಯಾಗಿರುವ ಮರಾಠ ಸಮಾಜವರು ಎಂದಿಗೂ ಕನ್ನಡಿಗರ ಭಾವನೆಗಳಿಗೆ ಚ್ಯುತಿ ಬರುವಂತೆ ನಡೆದುಕೊಂಡಿಲ್ಲ. ಇನ್ನು ಮುಂದೆಯೂ ಆ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ಮರಾಠ ಸಮಾಜ ಹಿಂದುತ್ವದ ಉಳಿವಿಗಾಗಿ ಹೋರಾಟ ಮಾಡುತ್ತಲೇ ಬಂದಿದೆ. ಛತ್ರಪತಿ ಶಿವಾಜಿ ಮಹಾರಾಜರು ಸ್ಥಾಪಿಸಿದ ಹಿಂದವೀ ಸಾಮ್ರಾಜ್ಯದ ಕಲ್ಪನೆ ಕನ್ನಡ ಮಣ್ಣಿನ ವಿಜಯನಗರ ಸಾಮ್ರಾಜ್ಯದ ಪಳೆಯುಳಿಕೆಗಳಿಂದ. ಕನ್ನಡ ನೆಲದಲ್ಲಿ ಶಿವಾಜಿ ಮಹಾರಾಜರು ನಡೆದಾಡಿದ್ದರೆ. ಇಲ್ಲಿನ ರಾಜರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದರು.
ಕಿತ್ತೂರು ರಾಣಿ ಚೆನ್ನಮ್ಮನ ಶಿವಾಜಿ ಮಹಾರಾಜರ ವಂಶವನ್ನು ಕಾಪಾಡಿದ್ದು, ಇತಿಹಾಸವಾಗಿದ್ದು, ಭಾರತದ ಇತಿಹಾಸದಲ್ಲೇ ಔರಂಗ ಜೇಬನನ್ನು 3 ಬಾರಿ ಸೋಲಿಸಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ್ದು ಈ ನಾಡಿನಲ್ಲೆ ಎಂಬುದು ಗಮನಾರ್ಹ ಎಂದರು.
ಕನ್ನಡ ನಾಡಿನಲ್ಲಿ ಸುಮಾರು 50 ಲಕ್ಷ ಮರಾಠರು ಬದುಕು ಕಟ್ಟಿಕೊಂಡು ಕನ್ನಡಿಗರೇ ಆಗಿದ್ದಾರೆ. ಇದೆಲ್ಲವನ್ನು ಮನಗಂಡು ಸಿಎಂ ಯಡಿಯೂರಪ್ಪನವರು ಮರಾಠ ನಿಗಮ ಸ್ಥಾಪನೆ ಮಾಡಿದ್ದಾರೆ. ಅವರಿಗೆ ಅಭಿನಂದಿಸುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿ. ರಾಮರಾವ್ ಕೋರೆಹಾರನ್ನಳ್ಳಿ, ರಂಗೋಜಿ ರಾವ್ ತಡಸ, ಹೆ್. ರಾಜರಾವ್, ರಾಮಚಂದ್ರ ಕದಂ, ಎಂ. ಮಲ್ಲೇಶಪ್ಪ, ಅಭಿಲಾಷ್ ಶಿಂಧೆ, ಚಂದ್ರೋಜಿರಾವ್ ಇದ್ದರು.