Saturday, July 2, 2022

Latest Posts

ಶತಮಾನಗಳ ಬಳಿಕ ಚಾಮುಂಡಿಬೆಟ್ಟದಲ್ಲಿ ಭಕ್ತರ ಸಂಭ್ರಮವಿಲ್ಲದೆ ಮುಕ್ತಾಯಗೊಂಡ ಆಷಾಢ ಮಾಸ

ಮೈಸೂರು: ಒಂದು ಶತಮಾನದ ಬಳಿಕ ಇದೇ ಮೊದಲ ಬಾರಿ ಇಡೀ ಆಷಾಢ ಮಾಸದಲ್ಲಿ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯ ನೆಲೆವೀಡಿನಲ್ಲಿ ಭಕ್ತರ ಸಂಭ್ರಮ, ಸಡಗರವಿರಲಿಲ್ಲ, ಭಕ್ತರ ಪ್ರವೇಶಕ್ಕೆ ಹಾಕಿದ್ದ ನಿರ್ಬಂಧದಿoದಾಗಿ ಬಹಳ ನೀರಸವಾಗಿ ಆಷಾಢ ಮಾಸ ಶಕ್ತಿ ದೇವತೆ ಚಾಮುಂಡೇಶ್ವರಿಯ ಆರಾಧನೆ ಮುಗಿದೆ. ಶತಮಾನದ ಹಿಂದೆ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು ಹರಡಿದ್ದಾಗ, ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಕೇವಲ ಅರ್ಚಕರು ಹಾಗೂ ರಾಜಮನೆತನದವರು ಮಾತ್ರ ಚಾಮುಂಡಿಬೆಟ್ಟದ ದೇವಸ್ಥಾನಕ್ಕೆ ಹೋಗಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಬರುತ್ತಿದ್ದರು. ಇದೀಗ ಕೊರೋನಾ ಮಹಾಮಾರಿಯ ಸಾಂಕ್ರಾಮಿಕ ಪಿಡುಗು ಚಾಮುಂಡೇಶ್ವರಿ ನೆಲೆಯೂರಿರುವ ಮೈಸೂರಿನಲ್ಲಿ ಅಬ್ಬರಿಸಿ, ಹಲವನ್ನು ಬಲಿತೆಗೆದುಕೊಂಡಿದೆ. ಎಲ್ಲೆಲ್ಲೂ ಭಯ, ಭೀತಿಯ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಈ ಹಿಂದಿನ ವರ್ಷಗಳಲ್ಲಿ ಇಡೀ ಮೈಸೂರು ನಗರದಲ್ಲಿ ಕಂಡು ಬರುತ್ತಿದ್ದ ಸಂಭ್ರಮದ ಚಾಮುಂಡೇಶ್ವರಿಯ ಆರಾಧನೆ ಈ ಬಾರಿ ಮಾಯವಾಗಿತ್ತು. ಬೀದಿ, ಬೀದಿಗಳಲ್ಲಿ ಚಾಮುಂಡೇಶ್ವರಿಯ ಪೂಜೆ, ಪ್ರಸಾದ ವಿತರಣೆಗೆ ಸಂಪೂರ್ಣವಾಗಿ ಕಡಿವಾಣ ಹಾಕಲಾಗಿತ್ತು. ಚಾಮುಂಡಿಬೆಟ್ಟದಲ್ಲೂ ವಿವಿಧ ಸಂಘಟನೆಗಳು ಪ್ರಸಾದ ತಯಾರಿಸುವುದು, ಭಕ್ತರಿಗೆ ವಿತರಿಸುವುದಕ್ಕೂ ನಿರ್ಬಂಧ ವಿಧಿಸಲಾಗಿತ್ತು.
ಪ್ರತಿ ಆಷಾಢ ಶುಕ್ರವಾರ ಚಾಮುಂಡಿಬೆಟ್ಟ ಭಕ್ತರಿಂದ ಗಿಜುಗುಡುತಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದು ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದರು. ಇದರಿಂದಾಗಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರತಿ ವರ್ಷ ಸಂಭ್ರಮ, ಸಡಗರ ಮನೆ ಮಾಡುತ್ತಿತ್ತು. ಆದರೆ ಈ ಬಾರಿ ಕರೋನಾ ಎಫೆಕ್ಟ್ ನಿಂದಾಗಿ ಇದೆಲ್ಲವೂ ಇಲ್ಲವಾಗಿದೆ.
ಭಕ್ತರಿಗೆ ತೀವ್ರ ನಿರಾಶೆ
ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು, ಹರಕೆ ತೀರಿಸಿ, ಹರಕೆ ಹೊತ್ತುಕೊಂಡು, ತಮ್ಮ ಇಷ್ಟಾರ್ಥ, ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಅವಕಾಶದಿಂದ ಈ ಬಾರಿ ಭಕ್ತರು ವಂಚಿತರಾಗಿದ್ದಾರೆ. ಚಾಮುಂಡೇಶ್ವರಿಯ ದರ್ಶನ ಕೇವಲ ಗಣ್ಯಾತಿ ಗಣ್ಯರಿಗೆ ಮಾತ್ರ ಲಭಿಸಿದೆ. ದೇವಸ್ಥಾನದಲ್ಲೂ ಸರಳ, ಸಾಂಪ್ರದಾಯಿಕ ಪೂಜೆಗಳು ಮಾತ್ರ ಚಾಮುಂಡೇಶ್ವರಿಗೆ ಸಲ್ಲಿಕೆಯಾಗಿದೆ. ಉತ್ಸವಗಳು ದೇವಸ್ಥಾನದ ಒಳ ಆವರಣಕ್ಕೆ ಮಾತ್ರ ಸೀಮಿತಗೊಂಡಿದ್ದವು.
ಕಡೆಯ ಆಷಾಢ ಶುಕ್ರವಾರವಾಗಿದ್ದ ಇಂದೂ ಕೂಡ ತಾಯಿ ಚಾಮುಂಡೇಶ್ವರಿ ಪ್ರಧಾನ ಅರ್ಚಕ ಡಾ.ಶಶೀಶೇಖರ್ ದೀಕ್ಷೀತ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮುಂಜಾನೆಯಿoದಲೇ ಅಭಿಷೇಕಗಳು ನಡೆದು, ಅಲಂಕಾರ ಮಾಡಿ, ಮಹಾಮಂಗಳಾರತಿ ಮಾಡಿದ ಬಳಿಕ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಬೀಗ ಹಾಕಲಾಯಿತು. ಈ ಮೂಲಕ ಕೊನೆಯ ಆಷಾಢ ಶುಕ್ರವಾರವೂ ನಿತ್ಯ ಪೂಜೆಗೆ ಸೀಮಿತವಾಯಿತು.
ಕೊನೆ ಶುಕ್ರವಾರವೂ ಕೂಡಾ ಭಕ್ತರಿಲ್ಲದೇ ಖಾಲಿ ಖಾಲಿಯಾಗಿ ಭಣಗುಡುತ್ತಿತ್ತು.

 

 

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss