Thursday, August 11, 2022

Latest Posts

ಶತಾಯುಷಿ ಮುನಿಆರ್ಯಸ್ವಾಮೀಜಿ ಶಿವೈಕ್ಯ

ಹೊಸ ದಿಗಂತ ವರದಿ, ಕೋಲಾರ:

ನಗರದ ಶಿವಗಿರಿ ಮಠದ ಶತಾಯುಷಿ ಶ್ರೀಮುನಿಆರ್ಯ ಸ್ವಾಮೀಜಿ(105)ಬುಧವಾರ ವಯೋಸಹಜ ಕಾರಣದಿಂದ ಶಿವೈಕ್ಯರಾದರು.
ಶ್ರೀಕೈವಾರ ನಾರೇಯಣ ತಾತಯ್ಯನವರ ಶಿಷ್ಯ ಪರಂಪರೆಯ ಮೂರನೇ ತಲೆಮಾರಿನ ಶ್ರೀಮನಿಆರ್ಯ ಸ್ವಾಮೀಜಿಯವರು ಧ್ಯಾನ, ಜಪ,ತಪಗಳ ಮೂಲಕ ಕೇವಲ ಹಾಲು ಹಣ್ಣು ಹಂಪಲನ್ನು ಮಾತ್ರ ಸೇವಿಸಿ ಧಾನ್ಯಮಗ್ನರಾಗಿ ಜೀವಿಸುತ್ತಿದ್ದರು.
ಶ್ರೀಗಳು ಯುವಕರಾಗಿದ್ದ ಸಂದರ್ಭದಲ್ಲಿ ಐದಾರು ದಶಕಗಳ ಹಿಂದೆ ಕೋಡಿಕಣ್ಣೂರು ಗ್ರಾಮದ ಬಳಿ 41 ದಿನಗಳ ಕಾಲ ಭೂಸ್ಥಾಪಿತರಾಗಿ ಧ್ಯಾನಸ್ಥರಾಗಿ ಗಮನ ಸೆಳೆದಿದ್ದರು. ಮಕ್ಕಳ ಬಾಲಗ್ರಹ ಪೀಡೆಯನ್ನು ಶ್ರೀಗಳು ಕೇವಲ ಮಂತ್ರ ಹಾಕಿ ಶಮನ ಮಾಡುವ ಮೂಲಕ ಜನಪ್ರಿಯರಾಗಿದ್ದರು. ಇವರ ಬಳಿಗೆ ಜಾತಿ ಧರ್ಮ ಲೆಕ್ಕಿಸದೆ ಮಕ್ಕಳನ್ನು ಪೋಷಕರು ಕರೆ ತರುತ್ತಿದ್ದರು. ಕೋಲಾರ ಜಿಲ್ಲೆ ಮಾತ್ರವಲ್ಲದೆ ನೆರೆಯ ಆಂಧ್ರಪ್ರದೇಶ, ತಮಿಳುನಾಡುಗಳಿಂದಲೂ ಭಕ್ತರು ಇವರ ಬಳಿಗೆ ಆಗಮಿಸುತ್ತಿದ್ದರು.
ಕೋಲಾರ ಜಿಲ್ಲೆಯಾದ್ಯಂತ ಈಗಲೂ ಸಾವಿರಾರು ಮಂದಿ ಭಕ್ತರನ್ನು ಹೊಂದಿರುವ ಇವರು ಕೋಲಾರ ಜಿಲ್ಲೆಯಲ್ಲಿ ಕೈವಾರ ನಾರೇಯಣ ತಾತನವರ ತತ್ವಪದಗಳ ಗಾಯನ ಮಾಡುವ ನೂರಾರು ಭಜನಾ ತಂಡಗಳ ಸಾರಥ್ಯವಹಿಸಿಕೊಂಡಿದ್ದರು.
ಆರೇಳು ತಿಂಗಳ ಹಿಂದಿನಿಂದಲೂ ಧ್ಯಾನಸ್ಥ ಸ್ಥಿತಿಯಲ್ಲಿಯೇ ಜೀವಿಸಿದ್ದ ಶ್ರೀಗಳು ಉತ್ತರಾಯಣ ಕಾಲದ ಸಂಕ್ರಾಂತಿ ಮುನ್ನಾದಿನ ಇಚ್ಛಾ ಮರಣಿಯಂತೆ ಶಿವೈಕ್ಯರಾಗಿರುವುದು ಭಕ್ತ ಸಮೂಹವನ್ನು ಅಚ್ಚರಿಪಡಿಸಿದೆ.
ಶ್ರೀಗಳ ಪರಿಶುದ್ಧ ದೇಹದ ಅಂತ್ಯಕ್ರಿಯೆಯನ್ನು ಭಕ್ತ ಮಂಡಳಿಯು ಆಶ್ರಮದಲ್ಲಿಯೇ  ಈ ಹಿಂದೆ ನಿಗದಿಪಡಿಸಿದ ಸ್ಥಳದಲ್ಲಿಯೇ ನೂರಾರು ಭಕ್ತರ ಸಮ್ಮುಖದಲ್ಲಿ ಗುರು ಸಂಪ್ರದಾಯದಂತೆ ಬುಧವಾರ ಸಂಜೆ ಸಮಾಽ ಮಾಡಲಾಯಿತೆಂದು ಮಠದ ಮುಖ್ಯಸ್ಥ ಯತಿರಾಜ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss