Monday, August 8, 2022

Latest Posts

ಶಾಂತಿಪಾಲನಾ ಪೂರ್ವಭಾವಿ ಸಭೆ: ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಬಕ್ರೀದ್ ಆಚರಣೆಗೆ ಮನವಿ

ಯಾದಗಿರಿ : ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲೆಯ ಮುಸ್ಲಿಂ ಬಾಂಧವರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಆಗಸ್ಟ್ 1ರಂದು ಈ ವರ್ಷದ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಬಕ್ರೀದ್ ಆಚರಣೆ ನಿಮಿತ್ತ ಶಾಂತಿಪಾಲನಾ ಪೂರ್ವಭಾವಿ ಸಭೆ ಹಾಗೂ ಅನಧಿಕೃತ ಪ್ರಾಣಿಹತ್ಯೆ/ ಸಾಗಾಣಿಕೆ ತಡೆಗಟ್ಟುವ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ರಾಜ್ಯದಲ್ಲಿ ಕೋವಿಡ್-19 ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾಹ್‍ಗಳಲ್ಲಿ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ. ಹಬ್ಬದಂದು ಸಾಮೂಹಿಕ ಪ್ರಾರ್ಥನೆ ನಿರ್ವಹಿಸಲು ಇಚ್ಚಿಸಿದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯು ಜೂನ್ 6ರಂದು ಹೊರಡಿಸಿರುವ ಸುತ್ತೋಲೆ ಹಾಗೂ ಜುಲೈ 24ರ ಸರ್ಕಾರದ ಆದೇಶದಂತೆ ಮಸೀದಿಗಳ ಆಡಳಿತ ಮಂಡಳಿಗಳು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಆಯಾ ಮಸೀದಿಗಳಲ್ಲಿ ಗರಿಷ್ಠ 50 ಜನರು ಮೀರದಂತೆ ಸಾಮೂಹಿಕ ಪ್ರಾರ್ಥನೆ ನಿರ್ವಹಿಸಲು ಅವಕಾಶ ನೀಡಬೇಕು. ಒಂದು ವೇಳೆ ಹೆಚ್ಚಿನ ಜನರು ಆಗಮಿಸಿದ್ದಲ್ಲಿ ಎರಡು ಅಥವಾ ಮೂರು ಬ್ಯಾಚ್‍ಗಳಲ್ಲಿ ಆಯಾ ಮಸೀದಿಗಳಲ್ಲಿಯೇ ನಮಾಜ್ ನಿರ್ವಹಿಸಲು ಅವಕಾಶವಿರುತ್ತದೆ. ಮಸೀದಿಗಳನ್ನು ಹೊರತುಪಡಿಸಿ ಸಭಾಂಗಣ, ಸಮುದಾಯ ಭವನ, ಶಾದಿ ಮಹಲ್ ಮತ್ತಿತರ ತೆರೆದ ಜಾಗಗಳಲ್ಲಿ ಬಕ್ರೀದ್ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜಿಸುವಂತಿಲ್ಲ ಎಂದು ತಿಳಿಸಿದರು.
ಮಾರ್ಗಸೂಚಿಗಳು: ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ನಡೆಸಲಾಗುವ ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡುವುದು ಸುರಕ್ಷಿತ. ನಮಾಜ್ ನಿರ್ವಹಿಸುವವರ ಮಧ್ಯ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು ಮತ್ತು ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ ನಡೆಸಬೇಕು. ಕೈಗಳನ್ನು ಸಾಬೂನು ಅಥವಾ ಸ್ಯಾನಿಟೈಸರ್‍ನಿಂದ ಶುಚಿಗೊಳಿಸಬೇಕು. ಮಸೀದಿಗಳಲ್ಲಿರುವ ಧಾರ್ಮಿಕ ಗ್ರಂಥಗಳನ್ನು ಮುಟ್ಟಬಾರದು. ಹಸ್ತಲಾಘವ ಮತ್ತು ಆಲಿಂಗನ ಮಾಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮಾಡುವುದು, ಸೋಪು ಅಥವಾ ಸ್ಯಾನಿಟೈಸರ್‍ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಕೊರೊನಾ ನಿಯಂತ್ರಣಕ್ಕಿರುವ ಸದ್ಯದ ಪರಿಹಾರವಾಗಿದೆ. ಪಾಸಿಟಿವ್ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆಹಚ್ಚಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕೋವಿಡ್-19 ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಆದ್ದರಿಂದ ಸಮಾಜದ ಮುಖಂಡರು ಕೊರೊನಾ ಪರೀಕ್ಷೆ ಬಗ್ಗೆ ಸಮುದಾಯದಲ್ಲಿ ತಿಳಿವಳಿಕೆ ಮೂಡಿಸಲು ಜಿಲ್ಲಾಧಿಕಾರಿಗಳು ಕೋರಿದರು.
ಹಬ್ಬದ ದಿನದಂದು ಮುಸ್ಲಿಂ ಜನಾಂಗದವರು ಹೆಚ್ಚು ವಾಸವಿರುವ ಏರಿಯಾಗಳಲ್ಲಿನ ಎಲ್ಲ ರಸ್ತೆ ಬದಿಯಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಹಬ್ಬದ ಅಂಗವಾಗಿ ಗೋಹತ್ಯೆ ಮಾಡುವುದು ಕಾನೂನಿನ ಅಪರಾಧವಾಗಿದ್ದು, ಈ ಬಗ್ಗೆ ಆಟೋಗಳ ಮುಖಾಂತರ ಪ್ರಚಾರ ಮಾಡುವಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಿದರು.
ಅನಧಿಕೃತ ಒಂಟೆ, ಗೋವು ಸಾಗಣೆ ನಿಷೇಧ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಒಂಟೆ, ಗೋವು ಸೇರಿದಂತೆ ಇತರೆ ಪ್ರಾಣಿಗಳನ್ನು ಸಾಗಣೆ ಮಾಡುವ ಸಂಭವವಿದ್ದು, ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಿ ಪ್ರಾಣಿಗಳ ಅಕ್ರಮ ಸಾಗಣೆ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬಕ್ರೀದ್ ಹಬ್ಬದಂದು ಗೋವು, ಒಂಟೆ ಹಾಗೂ ಇತರೆ ಪ್ರಾಣಿಗಳನ್ನು ಕಾನೂನು ಬಾಹಿರವಾಗಿ ವಧೆ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಪ್ರಾಣಿಗಳ ರಕ್ಷಣೆಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ. ಜಿಲ್ಲೆಯಿಂದ ತೆಲಂಗಾಣಕ್ಕೆ ಪ್ರಾಣಿಗಳು ಮಾರಾಟವಾಗುವ ಸಂಭವವಿರುವುದರಿಂದ ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ಸ್ಥಾಪಿಸಿ ವಾಹನ ಮತ್ತು ವಾಹನ ಸಂಖ್ಯೆಗಳ ಬಗ್ಗೆ ವಿಚಾರಣೆ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪಶು ಸಂಗೋಪನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರನ್ನೊಳಗೊಂಡ ತಂಡ ರಚನೆ ಮಾಡಿಕೊಂಡು ಅನಧಿಕೃತವಾಗಿ ಪ್ರಾಣಿಗಳು, ಗೋವು ಮತ್ತು ಒಂಟೆಗಳನ್ನು ಮಾರಾಟವಾಗುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಋಷಿಕೇಶ್ ಭಗವಾನ್ ಸೋನವಣೆ, ಐಎಎಸ್ ಪ್ರೊಬೇಷನರಿ ಅಧಿಕಾರಿ ಅಶ್ವಿಜಾ ಬಿ.ವಿ., ಪ್ರಭಾರಿ ಅಪರ ಜಿಲ್ಲಾಧಿಕಾರಿಗಳಾದ ಶಂಕರಗೌಡ ಎಸ್.ಸೋಮನಾಳ, ಡಿವೈಎಸ್‍ಪಿ ಯು.ಶರಣಪ್ಪ, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಹಾಗೂ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಬೈತುಲ್ ಮಹಲ್ ಅಧ್ಯಕ್ಷರಾದ ಲಾಯಕ್ ಹುಸೇನ್ ಬಾದಲ್, ಪ್ರಧಾನ ಕಾರ್ಯದರ್ಶಿ ಗುಲಾಮ್ ಸಮದಾನಿ ಮೂಸಾ, ವಾಹೀದ್ ಮಿಯಾ, ಗುಲಾಮ್ ಸಮದಾನಿ, ಜಹೀರ್ ಸಾಬ್ ಸವೇರಾ, ವೀರಶೈವ ಸಮಾಜದ ನಗರ ಘಟಕ ಅಧ್ಯಕ್ಷರಾದ ಅಯ್ಯಣ್ಣ ಹುಂಡೇಕಾರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಸಿದ್ದಪ್ಪ ಹೊಟ್ಟಿ ಸೇರಿದಂತೆ ಸಮಾಜದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss