ಒಂದೆಡೆ ಲಡಾಖ್ ಗಡಿ ಬಿಕ್ಕಟ್ಟು ಶಮನಕ್ಕಾಗಿ ಭಾರತದೊಂದಿಗೆ ಮಿಲಿಟರಿ ಹಂತದ, ರಾಜತಾಂತ್ರಿಕ ಮಟ್ಟದ ಸಭೆಯಲ್ಲಿ ಚೀನಾ ಭಾಗಿಯಾಗುತ್ತಿದೆ. ಇತ್ತ ಸದ್ದಿಲ್ಲದೇ ಗಡಿಯಲ್ಲಿ ಹೆಚ್ಚುವರಿ ಸೇನೆ ನಿಯೋಜಿಸುವುದರೊಂದಿಗೆ, ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸುವಲ್ಲಿಯೂ ಚೀನಾ ನಿರತವಾಗಿದೆ. ಇದರ ಪರಿಣಾಮವೇ ಗಡಿಯಲ್ಲಿ ೧೯೯೦ರ ರೀತಿಯ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ೧೯೯೩ರಲ್ಲಿ ಉಭಯ ರಾಷ್ಟ್ರಗಳು ಸಹಿ ಹಾಕಿದ್ದ ಶಾಂತಿ ಒಪ್ಪಂದವನ್ನು ಚೀನಾ ಗಾಳಿಗೆ ತೂರಿದೆ ಎಂದು ಭಾರತ ಹೇಳಿದೆ. ಅಲ್ಲದೇ ಒಂದುವೇಳೆ ಚೀನಾ ತನ್ನ ಕುತಂತ್ರಬುದ್ಧಿಯನ್ನು ಹೀಗೆ ಮುಂದುವರಿಸಿದಲ್ಲಿ, ಎರಡೂ ರಾಷ್ಟ್ರಗಳ ನಡುವಿನ ದೀರ್ಘಾವಧಿ ಆರ್ಥಿಕ ಸಂಬಂಧ ಅಂತ್ಯಗೊಳ್ಳಲಿದೆ ಎಂದೂ ಎಚ್ಚರಿಸಿದೆ. ಈ ನಡುವೆಯೇ ಚೀನಾ ತಂತ್ರಕ್ಕೆ ತಕ್ಕಉತ್ತರ ನೀಡಲೂ ಭಾರತ ಸಿದ್ಧವಾಗುತ್ತಿದೆ.
೧೯೯೩ರ ಶಾಂತಿ ಒಪ್ಪಂದವೇನು?: ಭಾರತದ ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಹಾಗೂ ಚೀನಾದ ಅಧ್ಯಕ್ಷ ಜಿಯಾಂಗ್ ಜೆಮಿನ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರ ಪ್ರಕಾರ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಉಭಯ ರಾಷ್ಟ್ರಗಳು ಕನಿಷ್ಠ ಪ್ರಮಾಣದಲ್ಲಿ ಮಾತ್ರವೇ ಸೇನೆಯನ್ನು ನಿಯೋಜಿಸಬೇಕೆಂದು ತೀರ್ಮಾನಿಸಲಾಗಿತ್ತು. ತದನಂತರ ಸುಮಾರು ೩ ದಶಕಗಳವರೆಗೂ ಚೀನಾ- ಭಾರತದ ನಡುವೆ ಉತ್ತಮ ಆರ್ಥಿಕ ಸಂಬಂಧ ಮುಂದುವರಿದಿದೆ. ಆದರೀಗ ಚೀನಾ ಒಪ್ಪಂದದ ನಿಯಮ ಉಲ್ಲಂಘಿಸಿದ್ದು, ಇದಕ್ಕೆ ಭಾರತವೂ ತಕ್ಕ ಉತ್ತರ ನೀಡಿದೆ.
ಚೀನಾಗೆ ಭಾರತದ ರಾಜತಾಂತ್ರಿಕ ಸೆಡ್ಡು: ಗ್ಯಾಲ್ವಾನ್ ಹಾಗೂ ದೌಲತ್ ಬೇಗ್ ಓಲ್ಡಿಯಲ್ಲಿ ಭಾರತ ಬಿಹಾರ ರೆಜಿಮೆಂಟ್ನ ೧೬ನೇ ಬೆಟಾಲಿಯನ್ಅನ್ನು ನಿಯೋಜಿಸಿರುವುದು ಚೀನಾಗೆ ತೀವ್ರ ನಿರಾಸೆ ಉಂಟುಮಾಡಿದೆ. ಏಕೆಂದರೆ ಜೂನ್ ೧೫ರಂದು ಉಭಯ ರಾಷ್ಟ್ರಗಳ ಯೋಧರ ನಡುವೆ ಉಂಟಾದ ಘರ್ಷಣೆ ವೇಳೆ ಬಿಹಾರ್ ಯುನಿಟ್ ಸೇನಾ ಪಡೆ ಚೀನಾಗೆ ತಕ್ಕ ಉತ್ತರ ನೀಡುವಲ್ಲಿ ಯಶಸ್ವಿಯಾಗಿತ್ತು. ಅದರಲ್ಲೂ ಇತ್ತೀಚೆಗಷ್ಟೇ ಗ್ಯಾಲ್ವಾನ್ ನದಿ ಸೇತುವೆಯನ್ನು ಭಾರತ ಚೀನಾದ ಉಪಟಳದ ನಡುವೆಯೂ ಪೂರ್ಣಗೊಳಿಸಿದೆ. ಕಾರಕೋರಮ್ ಕಣಿವೆಯಲ್ಲಿ ಭಾರತ ಟಿ -೯೦ ಟ್ಯಾಂಕರ್, ರಷ್ಯಾ ಹಾಗೂ ಅಮೆರಿಕ ನಿರ್ಮಿತ ಯುದ್ಧವಾಹನಗಳನ್ನು ನಿಯೋಜಿಸಿದೆ. ಮುಖ್ಯವಾಗಿ ದರ್ಬುಕ್-ಶಯೋಕ್- ದೌಲತ್ ಬೇಗ್ ರಸ್ತೆಯ ಸಂಪರ್ಕವನ್ನು ಭಾರತ ಕಡಿತಗೊಳಿಸಿದ್ದು, ಚೀನಾಗೆ ರಾಜತಾಂತ್ರಿಕ ಹಿನ್ನಡೆ ಉಂಟಾಗಿದೆ.
ಪ್ಯಾಟ್ರೋಲಿಂಗ್ ಪಾಯಿಂಟ್ ೧೪ಕ್ಕೆ ಪ್ರವೇಶ ರದ್ದು: ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾ ನೂತನ ನೆಲೆ ಹಾಗೂ ಮೂಲ ಸೌಕರ್ಯ ನಿರ್ಮಿಸುವ ಮೂಲಕ ಪ್ಯಾಟ್ರೋಲಿಂಗ್ ಪಾಯಿಂಟ್ ೧೪ಕ್ಕೆ ಭಾರತದ ಸಂಪರ್ಕ ಕಡಿತಗೊಳಿಸಿದೆ ಎಂದು ತಿಳಿದುಬಂದಿದೆ. ಇದರಿಂದ ಪ್ಯಾಟ್ರೋ ಲಿಂಗ್ ಪಾಯಿಂಟ್ ೧೪ ಬಳಿಯಿರುವ ವೈ ನಲ್ಲಾ ಪ್ರದೇಶವೂ ಭಾರತ-ಚೀನಾ ನಡುವೆ ನೂತನಯುದ್ಧ ಭೂಮಿಯಾಗಿ ಪರಿಣಮಿಸಲಿದೆ ಎಂದು ತಿಳಿದುಬಂದಿದೆ. ಪ್ಯಾಟ್ರೋಲಿಂಗ್ ಪಾಯಿಂಟ್ ೧೪ಕ್ಕೆ ೧ ಕಿ.ಮೀ. ಹಿಂದೆ ಚೀನಾ ಕಟ್ಟಡಗಳನ್ನು ನಿರ್ಮಿಸಿದ್ದು, ಇದುವರೆಗೂ ಭಾರತ ಈ ಪ್ರದೇಶದಲ್ಲಿ ಗಸ್ತು ನಡೆಸುತ್ತಿತ್ತು. ಗಡಿಯಿಂದ ಹೆಚ್ಚವರಿ ಸೇನೆಯನ್ನು ಹಿಂಪಡೆಯಲು ಚೀನಾ ಒಪ್ಪಿದ್ದರೂ, ಇತ್ತ ಹೆಚ್ಚುವರಿ ಸೇನೆ ತಂಗಲು ವ್ಯವಸ್ಥೆ ಕಲ್ಪಿಸುತ್ತಿದೆ.
ಚಳಿಗಾಲದ ತನಕ ಸೇನೆ ತಗ್ಗಿಸುವ ಪ್ರಕ್ರಿಯೆ?: ಇನ್ನು ಗಡಿಯಲ್ಲಿ ಉಭಯ ರಾಷ್ಟ್ರಗಳು ಸಂಪೂರ್ಣವಾಗಿ ತಮ್ಮ ಹೆಚ್ಚುವರಿ ಸೇನೆ ಹಿಂಪಡೆಯುವ ಪ್ರಕ್ರಿಯೆ ಚಳಿಗಾಲದ ತನಕ ಸಾಗಲಿದ್ದು, ಸದ್ಯ ಹೆಚ್ಚುವರಿ ಸೇನಾ ಪ್ರಮಾಣ ಇಳಿಸುವುದರ ಬಗ್ಗೆ ಎರಡೂ ರಾಷ್ಟ್ರಗಳು ಒತ್ತು ನೀಡುತ್ತಿವೆ ಎಂದು ತಿಳಿದುಬಂದಿದೆ. ಎರಡೂ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಶಮನಕ್ಕಾಗಿ ಮಾತುಕತೆ ನಡೆಯುತ್ತಿದ್ದು, ಸದ್ಯ ಹೆಚ್ಚುವರಿ ಸೇನೆ ಪ್ರಮಾಣ ತಗ್ಗಿಸುವುದರ ಬಗ್ಗೆ ಕೇಂದ್ರೀಕರಿಸುತ್ತಿವೆ ಎಂದು ಮಾಹಿತಿ ದೊರೆತಿದೆ.
ಭಾರತದ ಎಚ್ಚರಿಕೆ: ಗಡಿ ಪ್ರದೇಶದಲ್ಲಿ ಶಾಂತಿ ಹೇಗೆ ಕಾಪಾಡಬೇಕು ಎಂಬುದು ಭಾರತಕ್ಕೆ ಸ್ಪಷ್ಟವಾಗಿ ತಿಳಿದಿದೆ. ಮಿಲಿಟರಿ ಸಂದರ್ಭಗಳನ್ನು ನಿಭಾಯಿ ಸುವಲ್ಲಿ ಪರಿಣತಿಯೂ ಹೊಂದಿದೆ. ಆದರೆ ಇದರ ಫಲಿತಾಂಶ ಚೀನಾ ಪಾಲಿಗೆ ಕಹಿಯಾಗಿ ಇರಲಿದ್ದು, ದಶಕಗಳಿಂದ ಎರಡು ರಾಷ್ಟ್ರಗಳು ದ್ವಿಪಕ್ಷೀಯ ಸಂಬಂಧದಲ್ಲಿ ಕಂಡಿರುವ ಪ್ರಗತಿ, ಆರ್ಥಿಕ ಬಾಂಧವ್ಯ ಎಲ್ಲವೂ ಅಂತ್ಯಗೊಳ್ಳಲಿದೆ. ಹಾಗಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆದಷ್ಟು ಶೀಘ್ರವೇ ಗಡಿಯಿಂದ ಹೆಚ್ಚುವರಿ ಸೇನೆಯನ್ನು ಹಿಂಪಡೆಯಲು ಆದೇಶಿಸಬೇಕಿದ್ದು, ಗಡಿಯಲ್ಲಿನ ದಿನ ನಿತ್ಯದ ಉದ್ಧಟತನವನ್ನು ಯಾವುದೇ ಕಾರಣ ಕ್ಕೂ ಸಹಿಸಲು ಸಿದ್ಧವಿಲ್ಲ ಎಂದು ಭಾರತ ಎಚ್ಚರಿಸಿದೆ.
ಯುದ್ಧಕ್ಕೆ ಸಿದ್ಧಗೊಳ್ಳುತ್ತಿರುವ ಚೀನಾ: ಕಳೆದ ಮೂರು ದಿನದಿಂದ ಚೀನಾ ತನ್ನ ಯುದ್ಧ ವಿಮಾನದ ಹಾರಾಟ ನಡೆಸಿಲ್ಲ. ಆದರೂ ಗಡಿಯಲ್ಲಿ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಕೂಡಿಡುವುದನ್ನು ಮುಂದುವರಿಸಿದೆ. ಸುಮಾರು ೧,೫೯೭ ಕಿ.ಮೀ. ಎಲ್ಎಸಿ ಉದ್ದಕ್ಕೂ ಹೆಚ್ಚುವರಿ ಸೇನೆ ನಿಯೋಜಿಸಿದ್ದು, ಇವರು ಯಾವುದೇ ಕ್ಷಣದಲ್ಲದ್ದರೂ ದಾಳಿ ನಡೆಸಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಶ್ಗಾರ್, ಹೋಟಾನ್, ಯಾರ್ಕ್ಲ್ಯಾಂಡ್, ಕೋರ್ಲಾ ಹಾಗೂ ಗೊರ್ ಗೂನ್ಸಾದಲ್ಲಿ ಚೀನಾದ ವಾಯು ನೆಲೆಗಳಿದ್ದು, ಯುದ್ಧಕ್ಕೆ ಸಿದ್ಧವಾದಂತಿದೆ.