ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊಚ್ಚಿಯ ಮಾಲ್ನಲ್ಲಿ ಶಾಪಿಂಗ್ ಮಾಡುವ ವೇಳೆ ಇಬ್ಬರು ಯುವಕರು ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಕೇರಳದ ನಟಿ ತಮಗಾದ ಕರಾಳ ಅನುಭವ ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ. ಅವರೇ ಬರೆದುಕೊಂಡಿರುವಂತೆ ಕೊಚ್ಚಿಯ ಶಾಪಿಂಗ್ ಮಾಲ್ ನಲ್ಲಿ ನಡೆದ ಕಹಿ ಘಟನೆಯನ್ನು ಅ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಕುಟುಂಬದ ಜೊತೆ ಶಾಪಿಂಗ್ ಗೆ ತೆರಳಿದ್ದ ವೇಳೆ ಇಬ್ಬರು ಯುವಕರು ನನ್ನನ್ನು ಹಿಂಬಾಲಿಸಿದರು. ದೇಹದ ವೈಯಕ್ತಿಕ ಭಾಗಗಳನ್ನು ಮುಟ್ಟಿದರು ಮತ್ತು ನನ್ನನ್ನು ಹಿಡಿದರು. ಈ ಅನಿರೀಕ್ಷಿತ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೆ. ನನಗೆ ತಕ್ಷಣ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ ಎಂದು ನಟಿ ಹೇಳಿದ್ದಾರೆ.
ನಾನು ಅವರ ಬಳಿಗೆ ಹೋಗಲು ಪ್ರಯತ್ನಿಸಿದಾಗ, ಇಬ್ಬರು ನನ್ನನ್ನು ನೋಡಲಿಲ್ಲ ಎಂಬಂತೆ ವರ್ತಿಸಿದರು. ನಂತರ ನಾನು ನಗದು ಕೌಂಟರ್ನಲ್ಲಿದ್ದಾಗ, ಅವರು ಬಂದು ನನ್ನೊಂದಿಗೆ ಮಾತನಾಡಲು ಪ್ರಯತ್ನಿಸಿದರು . ನನ್ನ ತಾಯಿಯನ್ನು ನೋಡಿದ ನಂತರ ಅವರು ಅಲ್ಲಿಂದ ಹೊರಟು ಹೋದರು. ಮಹಿಳೆಯರು ಮನೆಯಿಂದ ಹೊರಹೋದಾಗ ಜಾಗರೂಕರಾಗಿರಬೇಕು. ಮನೆಯಿಂದ ಹೊರನಡೆದಾಗ ಪ್ರತಿ ಕ್ಷಣವೂ ನಾವು ಜಾಗರೂಕರಾಗಿರಬೇಕು. ಬಟ್ಟೆ ಬಗ್ಗೆ ಆಗಾಗ ನೋಡಿಕೊಳ್ಳುತ್ತಿರಬೇಕು, ಜನಸಂದಣಿ ಇದ್ದ ಜಾಗದಲ್ಲಿ ನನ್ನ ಕೈಗಳಿಂದ ನನ್ನ ಎದೆಯ ಭಾಗವನ್ನು ಕಾಪಾಡಿಕೊಳ್ಳಬೇಕು. ಇದನ್ನೆಲ್ಲ ನೋಡಿದಾಗ ನನ್ನ ತಾಯಿ, ಸಹೋದರಿ, ಸ್ನೇಹಿತೆಯರಿಗೂ ಇದೇ ರೀತಿ ಆಗಿರಬಹುದೇನೋ ಅಂದುಕೊಳ್ಳುತ್ತೇನೆ. ಇದೆಲ್ಲಾ ಇಂಥ ಕೆಟ್ಟ ಪುರುಷರಿಂದ. ನೀವು ನಮ್ಮ ಸುರಕ್ಷತೆಯನ್ನು ಕಿತ್ತುಕೊಳ್ಳುತ್ತೀರಿ. ನೀವು ನಮ್ಮ ಆರಾಮ ಮತ್ತು ನಮ್ಮ ಸ್ತ್ರೀತ್ವದ ಸಂತೋಷವನ್ನು ಕಸಿಯುತ್ತಿದ್ದೀರಿ, ನಾನು ನಿಮ್ಮಂತವರನ್ನು ತಿರಸ್ಕರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ ಸುಮೋಟೋ ಪ್ರಕರಣವನ್ನು ದಾಖಲಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಮಹಿಳಾ ಆಯೋಗ ಈ ಬಗ್ಗೆ ಖುದ್ದಾಗಿ ನಟಿಯನ್ನು ಭೇಟಿಯಾಗಿ ಘಟನೆಯ ವಿವರಗಳನ್ನು ಕಲೆ ಹಾಕುವುದಾಗಿ ತಿಳಿಸಿದೆ.