Wednesday, August 10, 2022

Latest Posts

ಶಾರ್ಟ್ ಸರ್ಕ್ಯೂಟ್ ಗೆ ಬ್ಯಾಂಕ್ ಬೆಂಕಿಗಾಹುತಿ: ಕಂಪ್ಯೂಟರ್ ಸೇರಿದಂತೆ ಹಲವಾರು ದಾಖಲಾತಿಗಳು ಭಸ್ಮ

ಶನಿವಾರಸಂತೆ: ವಿದ್ಯುತ್ ಅಡಚಣೆ ಸಂದರ್ಭದಲ್ಲಿ ಬ್ಯಾಂಕಿನಲ್ಲಿ ಅಳವಡಿಸಿದ ಯುಪಿಎಸ್ ಉಪಕರಣದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡು ಬ್ಯಾಂಕ್ ಸೇರಿದಂತೆ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಪಟ್ಟ ಕಂಪ್ಯೂಟರ್, ಗ್ರಾಹಕರ ವ್ಯವಹಾರದ ದಾಖಲಾತಿ, ಕಡತಗಳು, ಪೀಠೋಪಕರಣಗಳು ಬೆಂಕಿಗೆ ಆಹುತಿಯಾದ ಘಟನೆ ಆಲೂರುಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದಿದೆ.
ಬೆಳಗಿನ ಜಾವ 4-30 ಸುಮಾರಿಗೆ ಆಲೂರುಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್  ಉಂಟಾಗಿ ಬ್ಯಾಂಕಿನೊಳಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆ ಗ್ರಾಹಕರ ವ್ಯವಹಾರದ ಸಿಬ್ಬಂದಿ ನಿರ್ವಹಿಸುವ ಕೌಂಟರ್, ದಾಖಲಾತಿ ವ್ಯವಹಾರ ನಡೆಸುವ ಮತ್ತು ಗ್ರಾಹಕರ ಲೆಕ್ಕಪತ್ರ ವ್ಯವಹಾರ ನಡೆಸುವ ಕಂಪ್ಯೂಟರ್‍ಗಳು, ಕೌಂಟರ್‍ನಲ್ಲಿರುವ ಪೀಠೋಪಕರಣಗಳು, ಕೈಬರಹದ ದಾಖಲಾತಿ ಕಡತಗಳು, ದಿನನಿತ್ಯದ ಬ್ಯಾಂಕ್ ವ್ಯವಹಾರ ಮತ್ತು ಲೆಕ್ಕಾಚಾರಕ್ಕೆ ಸಂಬಂಧಪಟ್ಟ ಕಂಪ್ಯೂಟರ್ ಮತ್ತು ಉಪಕರಣಗಳು, ಸ್ಕ್ಯಾನರ್ ಮತ್ತು ಪ್ರಿಂಟರ್ ಉಪಕರಣ, ಬ್ಯಾಂಕ್ ಒಳಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾ ಬೆಂಕಿಗೆ ಭಸ್ಮವಾಗಿದೆ.
ವ್ಯವಸ್ಥಾಪಕರ ಕೊಠಡಿ ಹೊರತುಪಡಿಸಿದಂತೆ ಇಡೀ ಬ್ಯಾಂಕ್ ಬೆಂಕಿಗೆ ಆಹುತಿಗೊಂಡಿದೆ. ಬೆಳಗ್ಗೆ 4-30 ಸುಮಾರಿಗೆ ಬ್ಯಾಂಕ್‍ನಿಂದ ಹೊಗೆಯಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೆ ಸ್ಥಳೀಯ ನಿವಾಸಿಯಾಗಿರುವ ಬ್ಯಾಂಕ್ ಅಕೌಂಟೆಂಟ್‍ಗೆ ದೂರವಾಣಿ ಕರೆ ಮಾಡಿದ್ದಾರೆ ಕೂಡಲೆ ಅವರು ಬ್ಯಾಂಕ್ ವ್ಯವಸ್ಥಾಪಕ, ಬ್ಯಾಂಕ್ ಅಧ್ಯಕ್ಷರು, ಸ್ಥಳೀಯ ಬ್ಯಾಂಕ್ ಆಡಳಿತ ಮಂಡಳಿ ನಿರ್ದೆಶಕರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅವರುಗಳು ಕುಶಾಲನಗರ ಅಗ್ನಿಶಾಮಕ ದಳ ಮತ್ತು ಶನಿವಾರಸಂತೆ ಪೊಲೀಸರಿಗೆ ಮಾಹಿತಿ ನೀಡಿದರು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಅನಾಹುತಕ್ಕೆ ಬ್ಯಾಂಕ್‍ನಲ್ಲಿ ಅಳವಡಿಸಲಾದ ಯುಪಿಎಸ್ ಅಳವಡಿಕೆಯಲ್ಲಿ ವ್ಯತ್ಯಾಸಗೊಂಡು ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಬ್ಯಾಂಕ್ ವ್ಯವಸ್ಥಾಪಕ ಪಿ.ಎಸ್..ಲೀಲಾಕುಮಾರ್, ಆಡಳಿತ ಮಂಡಳಿ ಅಧ್ಯಕ್ಷ ಎಸ್.ಜೆ.ಪ್ರಸನ್ನಕುಮಾರ್, ನಿರ್ದೇಶಕರಾದ ಭರತ್, ವಿಜಯ್ ಅವರುಗಳು ಸಂಬಂದಪಟ್ಟ ಬ್ಯಾಂಕ್ ಮುಖ್ಯಸ್ಥರಿಗೆ, ಸಹಕಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಠಾಣಾಧಿಕಾರಿ ಗೋವಿಂದ್ ಭೇಟಿ ನೀಡಿ ಪರಿಶೀಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss