ಮಡಿಕೇರಿ: ದಿನದಿಂದ ದಿನಕ್ಕೆ ಕೊರೋನಾ ವೈರಸ್ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸದ್ಯ ಶಾಲೆಗಳನ್ನು ಆರಂಭಿಸಬಾರದು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮನವಿ ಮಾಡಿದರು.
ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಬೇಕು. ಅಂತರ ಕಾಯ್ದುಕೊಳ್ಳಬೇಕು. 130 ಕೋಟಿ ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು ಎಂದು ಅವರು ತಿಳಿಸಿದರು.
ಶಾಲೆ ಆರಂಭ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಕ್ಕಳ ಜೀವ ಮತ್ತು ಜೀವನ ಅತೀ ಮುಖ್ಯ. ನಂತರ ಶಿಕ್ಷಣ. ಆ ನಿಟ್ಟಿನಲ್ಲಿ ಯೋಚಿಸಬೇಕಿದೆ ಎಂದು ಸಲಹೆ ಮಾಡಿದರು.
ಪ್ರತಿಯೊಬ್ಬ ಪ್ರವಾಸಿಗರು ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್ ಪರೀಕ್ಷೆ ಮಾಡಿಸಿಕೊಂಡವರಿಗೆ ಮಾತ್ರ ಹೋಂ ಸ್ಟೇ ಮತ್ತು ರೆಸಾಟ್೯ ಗಳಲ್ಲಿ ಅವಕಾಶ ನೀಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ಅವರು ಮನವಿ ಮಾಡಿದರು.
ಕೋವಿಡ್-19 ನಿಯಂತ್ರಿಸಲು ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಮುನ್ನೆಚ್ಚರಿಕೆ ವಹಿಸಬೇಕಿದೆ. ಮುಂದಿನ ದಿನಗಳಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಕೋವಿಡ್ ತಪಾಸಣೆ ಕೈಗೊಳ್ಳುವ ಸಂಬಂಧ ಚಿಂತಿಸಲಾಗುವುದು. ದಸರಾವನ್ನು ತುಂಬಾ ಸರಳವಾಗಿ ಆಚರಿಸಬೇಕಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಇದೇ ಸಂದರ್ಭದಲ್ಲಿ ಶಾಸಕರಾದ ಅಪ್ಪಚ್ಚುರಂಜನ್ ಅವರು ಗೂಡ್ಸ್ ಆಟೋ ಚಾಲಕರಿಗೆ ಮುಖಗವಸು ವಿತರಿಸಿದರು.