ಹೊಸ ದಿಗಂತ ಆನ್ಲೈನ್ ಡೆಸ್ಕ್:
ತರಾತುರಿಯಲ್ಲಿ ಶಾಲೆ ತೆರದ ಸೈಡ್ ಇಫೆಕ್ಟ್ ಆಂಧ್ರದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.
ಶಾಲೆಗಳನ್ನು ಆರಂಭಿಸಬೇಕೆ, ಬೇಡವೇ ಎಂಬ ಗೊಂದಲದ ನಡುವೆಯೇ ಆಂಧ್ರಪ್ರದೇಶದಲ್ಲಿ ಶಾಲೆಗಳನ್ನು ತೆರೆಯಲಾಗಿದ್ದು, ಶಾಲೆ ತೆರೆದ ಮೂರು ದಿನಗಳಲ್ಲಿ 160 ಶಿಕ್ಷಕರು ಮತ್ತು 262 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಶಿಕ್ಷಣ ಇಲಾಖೆ ಹೇಳಿದೆ.
ನ.2 ರಿಂದ 9 ಮತ್ತು 10 ನೇ ತರಗತಿಯ ಮಕ್ಕಳಿಗೆ ಶಾಲೆಗಳು ಪುನರಾರಂಭಿಸಲಾಗಿದೆ. ಹಲವರು ಪೋಷಕರು ಇದಕ್ಕೆ ಸಮ್ಮತಿ ನೀಡದಿದ್ದರೂ, ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಶಾಲೆಯನ್ನು ಆರಂಭ ಮಾಡಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಇಲಾಖೆ ಆಯುಕ್ತ ವಿ. ಚಿನ್ನ ವೀರಭದ್ರುಡು, ಇದರಿಂದ ಆತಂಕಪಡುವ ಅಗತ್ಯವಿಲ್ಲ. ಶಾಲೆ ತೆರೆಯುವುದಕ್ಕೂ, ಕೋವಿಡ್ ಬಂದಿದೆ ಎನ್ನುವುದಕ್ಕೂ ಸಂಬಂಧ ಇದೆ ಎಂದು ಕಲ್ಪಿಸಲು ಆಗದು. ರಾಜ್ಯಾದ್ಯಂತ ಸುಮಾರು 4 ಲಕ್ಷ ವಿದ್ಯಾರ್ಥಿಗಳು ಮತ್ತು 99 ಸಾವಿರ ಮಂದಿ ಶಿಕ್ಷಕರು ಶಾಲೆಗೆ ಹಾಜರಾಗಿದ್ದಾರೆ. ಒಟ್ಟೂ ಮಕ್ಕಳ ಸಂಖ್ಯೆಗೆ ಹೋಲಿಸಿದರೆ ಶೇ 0.1ರಷ್ಟು ಮಕ್ಕಳಿಗೆ ಸೋಂಕು ತಗುಲಿದೆ. ಈ ಸಂಖ್ಯೆಗೆ ಹೋಲಿಸಿಕೊಂಡರೆ ಕರೊನಾ ವೈರಸ್ಗೆ ತುತ್ತಾಗಿರುವವರು ಅತ್ಯಂತ ಕಡಿಮೆ ಮಂದಿ. ಪ್ರತಿ ಶಾಲೆಯಲ್ಲೂ ಕೋವಿಡ್ 19 ಮಾರ್ಗಸೂಚಿ ಅನುಸರಿಸಲಾಗುತ್ತಿದೆ. ಪ್ರತಿ ಕೊಠಡಿಯಲ್ಲಿ ಕುಳಿತುಕೊಳ್ಳಲು 15 ಅಥವಾ 16 ವಿದ್ಯಾರ್ಥಿಗಳಿಗಷ್ಟೇ ಅವಕಾಶ ನೀಡಲಾಗುತ್ತಿದೆ ಎಂದಿದ್ದಾರೆ.