Saturday, August 13, 2022

Latest Posts

ಶಾಲೆ ತೆರೆಯಲು ಅವಸರ ಬೇಡ, ಮಕ್ಕಳಿಗೆ ಆನ್‌ಲೈನ್ ಪಾಠವೂ ಬೇಡ: ಮಾಜಿ ಸಚಿವ ಹೆಚ್.ವಿಶ್ವನಾಥ್

ಮೈಸೂರು: ಮಕ್ಕಳಿಗೆ ಆನ್‌ಲೈನ್‌ನಲ್ಲಿ ಪಾಠ ಆರಂಭಿಸುವುದಕ್ಕೆ ಮಾಜಿ ಶಿಕ್ಷಣ ಸಚಿವ ಹೆಚ್.ವಿಶ್ವನಾಥ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನ್‌ಲೈನ್‌ನಲ್ಲಿ ಮಕ್ಕಳಿಗೆ ಪಾಠ ಮಾಡುವ ವಿಧಾನ ಸರಿಯಲ್ಲ. ಏಕೆಂದರೆ ಮಕ್ಕಳು ಆನ್ ಲೈನ್ ಪಾಠ ಕೇಳಲು, ನೋಡಲು ಮೊಬೈಲ್‌ಗಳನ್ನು ಉಪಯೋಗಿಸಬೇಕಾಗುತ್ತದೆ. ಕೆಲವು ಸಾಪ್ಟ್ವೇರ್ ಕಂಪನಿಗಳು ಇದರಲ್ಲಿ ಪರಿಣತರಾಗಿಲ್ಲ. ಆನ್‌ಲೈನ್ ಪಾಠ ಮಕ್ಕಳಿಗೆ ಅನುಕೂಲಕ್ಕಿಂತ ಅನಾಹುತವೇ ಹೆಚ್ಚಾಗಲಿದೆ. ಪ್ರಸ್ತುತ ತಯಾರಿಸಿರುವ ಸಾಫ್ಟ್ವೇರ್ ಪರಿಕಲ್ಪನೆ ಅನಾಹುತವನ್ನುಂಟು ಮಾಡಲಿದೆ. ಕಂಪನಿಗಳಿಗೆ ಹಣ ಮುಖ್ಯವೇ ಹೊರತು, ಬೇರೆ ವಿಚಾರ ಅನಾವಶ್ಯಕವಾಗುತ್ತದೆ. ಹಾಗಾಗಿ ಆನ್‌ಲೈನ್ ಪಾಠ ಮಾಡುವ ವಿಧಾನ ಜಾರಿಗೆ ತರಬಾರದು. ಈ ಬಗ್ಗೆ ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಕೊರೊನಾ ಜೊತೆ ಶಿಕ್ಷಣ ವ್ಯವಸ್ಥೆ ಹೇಗೆ ಇರಬೇಕು ಎಂಬುವುದರ ಬಗ್ಗೆಯೂ ಪತ್ರದಲ್ಲಿ ಬರೆಯುತ್ತೇನೆ. ನಾನು ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೀನಿ, ನನ್ನ ಅನುಭವ ಹಂಚಿಕೊಳ್ಳುತ್ತೀನಿ ಎಂದರು.ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶಾಲೆ ತೆರೆಯಲು ಅವಸರ ಬೇಡ ಹಾಗೂ ಆನ್ ಲೈನ್ ನಲ್ಲಿ ಪಾಠ ಮಾಡುವುದೂ ಬೇಡ. ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಶಾಲೆ ತೆರೆದರೆ ಪ್ರತಿ ಮಗುವಿಗೆ ಕೋವಿಡ್ ಟೆಸ್ಟ್ ಆಗಬೇಕು. ಒಂದು ಮಗುವಿಗೆ ಕೊರೋನಾ ಬಂದರೆ, ಉಳಿದ ಮಕ್ಕಳಿಗೂ ಬರುವ ಅಪಾಯವಿದೆ. ಅಲ್ಲದೇ ಕುಟುಂಬ, ಶಾಲೆಯನ್ನು ಸಹ ಕ್ವಾರಂಟೈನ್ ಮಾಡಬೇಕಾಗುತ್ತದೆ. ವರ್ಷದಲ್ಲಿ ೨೨೨ ದಿನ ಶಾಲೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ ೨೦೦ ದಿನ ಶಾಲೆ ನಡೆದರೆ ತೊಂದರೆ ಇಲ್ಲ ಎಂದು ಹೇಳಿದರು.
೧ ರಿಂದ ೭ ನೇ ತರಗತಿವರೆಗೆ ಮನೆಯಲ್ಲಿ ಪಾಠ ಮಾಡಬಹುದು. ಬೇರೆ ದೇಶದಲ್ಲಿ ಸಿಲಬಸ್ ಕಡಿಮೆ, ಹೆಚ್ಚು ಬುದ್ಧಿವಂತಿಕೆಗೆ ಆದ್ಯತೆ ಕೊಡುತ್ತಾರೆ. ಅದೇ ರೀತಿ ನಮ್ಮ ದೇಶದಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ವಿವಿಧ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತದೆ. ಬೇರೆ ರಜಾ ದಿನಗಳನ್ನು ಕಟ್ ಮಾಡಿ, ಜಯಂತಿ ಮಾಡದಿದ್ದರೆ ಜಗತ್ತು ಮುಳುಗುವುದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಸ್.ಡಿ.ಮಹೇಂದ್ರ, ಮಾಜಿ ಅಧ್ಯಕ್ಷ ಶಿವಣ್ಣ, ಪಕ್ಷದ ವಕ್ತಾರ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss