Thursday, July 7, 2022

Latest Posts

ಶಾಲೆ ತೆರೆಯುವ ಧಾವಂತ ಇಲ್ಲ : ಫೇಸ್ ಬುಕ್ ನಲ್ಲಿ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

ಬೆಂಗಳೂರು: ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯುವ ಧಾವಂತ ನಮ್ಮ ಸರ್ಕಾರಕ್ಕಾಗಲಿ ಅಥವಾ ಶಿಕ್ಷಣ ಇಲಾಖೆಗಾಗಲಿ ಖಂಡಿತ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಫೇಸ್ ಬುಕ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ನಮಗೆ ನಮ್ಮ‌ ಮಕ್ಕಳ ಆರೋಗ್ಯ, ಸುರಕ್ಷತೆ ಅತ್ಯಂತ ಮುಖ್ಯ. ಅವುಗಳನ್ನು ಬಲಿಕೊಟ್ಟು ಯಾರೂ ಯಾವ ಕಾರ್ಯವನ್ನೂ ಪ್ರತಿಷ್ಟೆಗಾಗಿ ಮಾಡಬಾರದು. ಮಾಡುವುದಿಲ್ಲ. ಶಾಲೆಗಳ ಬಗ್ಗೆ ರಾಜ್ಯದ ಎಲ್ಲಾ ಶಾಸಕರುಗಳ ಅಭಿಪ್ರಾಯವನ್ನು ಸುಮಾರು 9 ದಿವಸಗಳ ಹಿಂದೆ ನಾನು ಕೇಳಿದ್ದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಹಿಡಿದು, ಅನೇಕ ಸಚಿವರು, ಶಾಸಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಅದೇ ರೀತಿ ಆರೋಗ್ಯ ಸಚಿವ ಶ್ರೀರಾಮುಲು ಅವರೂ ಈ ಕುರಿತು ಚರ್ಚೆ ನಡೆಸಿ ನನಗೆ ತಮ್ಮ ಅಭಿಪ್ರಾಯ ನೀಡುವುದಾಗಿ ತಿಳಿಸಿದ್ದಾರೆ. ಡಾ. ಸುಧಾಕರ್ ಅವರೂ ನನಗೆ ಪತ್ರದ ಮೂಲಕ ಅಭಿಪ್ರಾಯ ತಿಳಿಸಿದ್ದಾರೆ.‌
ಆದರೆ, ಅಭಿಪ್ರಾಯಗಳನ್ನು ಕೇಳಿದ ಮಾತ್ರಕ್ಕೆ ಸರ್ಕಾರ ಶಾಲೆಗಳನ್ನು ಆರಂಭ ಮಾಡುವ ನಿರ್ಧಾರವನ್ನು ಈಗಾಗಲೇ ಕೈಗೊಂಡೇ ಬಿಟ್ಟಿದೆ ಎಂಬರ್ಥದಲ್ಲಿ ವಿಪುಲವಾಗಿ ಚರ್ಚೆ ನಡೆಯುತ್ತಿರುವುದು ದುರದೃಷ್ಟಕರ. ಮತ್ತೆ ಮತ್ತೆ ಇದು ಮರುಕಳಿಸುತ್ತಲೇ ಇದೆ. ನಾನು ಬಾರಿ ಬಾರಿ ಸ್ಪಷ್ಟೀಕರಣ ಕೊಡುತ್ತಲೇ ಇದ್ದೇನೆ.
ಈಗಾಗಲೇ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳು ಸಹ ಈ ಕುರಿತು ಸರ್ಕಾರದ ನಿಲುವನ್ನು ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ.
ನಾನು ಮತ್ತೊಮ್ಮೆ, ಮಗದೊಮ್ಮೆ ಸ್ಪಷ್ಟಗೊಳಿಸುತ್ತಿದ್ದೇನೆ.‌ ಶಾಲೆ ಪ್ರಾರಂಭ ಮಾಡುವ ಯಾವುದೇ ತರಾತುರಿ ನಮ್ಮ ಮುಂದೆ ಇಲ್ಲ.
ನಾನು ಈ ರಾಜ್ಯದ ಶಿಕ್ಷಣ ಸಚಿವ ಮಾತ್ರನಲ್ಲ. ಸುಮಾರು 1 ಕೋಟಿ ಮಕ್ಕಳ ಪೋಷಕ ಎಂಬುದರ ಅರಿವು ನನಗಿದೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss