Friday, July 1, 2022

Latest Posts

ಶಾಸಕರ ಮನೆಗೆ ಬೆಂಕಿಯಿಡುವ ಸಂಘಟನೆಯೊಂದಿಗೆ ಕೈ ಸಾಥ್: ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಬೆಂಗಳೂರು: ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್ ಅಪಪ್ರಚಾರಗಳನ್ನು ಮಾಡುವುದಲ್ಲದೇ ಗಲಭೆಗಳನ್ನು ಸೃಷ್ಟಿಸುತ್ತಿದೆ. ತನ್ನ ಪಕ್ಷದ  ಶಾಸಕನನ್ನು ರಕ್ಷಿಸದೆ ಅವರ ಮನೆಗೆ ಬೆಂಕಿ ಹಾಕುವ ಸಂಘಟನೆಗೆ ಕೈ ಜೋಡಿಸಿದೆ. ಕೆಜೆ ಹಳ್ಳಿ, ಡಿಜೆ ಹಳ್ಳಿ ಘಟನೆ ವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಿದ್ದರೆ ಶಾಸಕನ ಮನೆಗೆ ಅಲ್ಲ ರಾಜ್ಯಕ್ಕೆ ಬೆಂಕಿ ಬೀಳುತ್ತಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ಶುಕ್ರವಾರ ವರ್ಚುವಲ್ ಮುಖಾಂತರ ರಾಜರಾಜೇಶ್ವರಿ ನಗರದ ಮತದಾರರನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ವೈಚಾರಿಕವಾಗಿ ಭಿನ್ನವಾಗಿರುವ ಕುಟುಂಬ ರಾಜಕಾರಣ ಹೊಂದಿರುವ ಒಂದು ಪಕ್ಷ ಹಾಗೂ ವಂಶಾಡಳಿತ ಇರುವ ಇನ್ನೊಂದು ಪಕ್ಷ 2018 ರ ಚುನಾವಣೆ ಬಳಿಕ ಅನೈತಿಕ ರಾಜಕಾರಣವನ್ನು ಮಾಡಲು ಮುಂದಾಗಿತ್ತು. ಮೈತ್ರಿ ಸರ್ಕಾರದ ಜನ ವಿರೋಧಿ ನೀತಿಗಳಿಂದ ಬೇಸತ್ತ 18 ಶಾಸಕರು ರಾಜಿನಾಮೆ ನೀಡಿ ಬಿಜೆಪಿಗೆ ಬೆಂಬಲ ನೀಡಿದ್ದರು. ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡದೆ ಇದ್ದಾಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ಶಾಸಕರಿಗೆ ಬೆಂಬಲ ನೀಡಿರಲಿಲ್ಲ. ಜನವಿರೋಧಿ ನೀತಿಯಿಂದ ಜನರು ಬಿಜೆಪಿಗೆ ಉಪ ಚುನಾವಣೆಯಲ್ಲಿ ಆಶೀರ್ವಾದ ಮಾಡಿ 13 ಜನ ಶಾಸಕರನ್ನು ನೀಡಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಜವಬ್ದಾರಿ ವಹಿಸಿಕೊಂಡಾಗ ರಾಜ್ಯದಲ್ಲಿ ನೆರೆ -ಬರ ಎರಡೂ ಇತ್ತು. ಮುಖ್ಯಮಂತ್ರಿಗಳೇ ಖುದ್ದು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರಗಳನ್ನು ನೀಡುವ ಕಾರ್ಯ ಮಾಡಿದ್ದಾರೆ. ರಾಜ್ಯ ಅಭಿವೃದ್ಧಿಯ ಹಂತದಲ್ಲಿರುವಾಗ ಕೋವಿಡ್ ಹರಡಿದ್ದು ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಸುದೀರ್ಘ ಅವಧಿಯಲ್ಲಿ ರಾಜ್ಯದಲ್ಲಿ ಕೇವಲ 4 ಲ್ಯಾಬ್ ಗಳಿದ್ದವು. ಆದರೆ ಈಗ 100 ಲ್ಯಾಬ್ ಗಳನ್ನು ಮಾಡಲಾಗಿದೆ. ವೆಂಟಿಲೇಟರ್ ಗಳು ಇರಲಿಲ್ಲ. ಮುಖ್ಯಮಂತ್ರಿಗಳು ಚರ್ಚಿಸಿ 30000 ವೆಂಟಿಲೇಟರ್ ಗಳನ್ನು ಖರೀದಿ ಮಾಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫಿವರ್ ಕ್ಲಿನಿಕ್ ಗಳನ್ನು ತೆರೆಯಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಯಾರು ಹಸಿವಿನಿಂದ ಇರಬಾರದು ಎಂಬ ಕಾರಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟಾಗಿ ಅಕ್ಕಿಯನ್ನು ವಿತರಿಸಲಾಗಿದೆ. ಇದನ್ನು ಸಹಿಸದ ಕಾಂಗ್ರೆಸ್ ಅಪ ಪ್ರಚಾರ ಮಾಡಲು ಹೊರಟಿದೆ. ಎಲ್ಲಿ ಸೋತು ಬಿಡುತ್ತೇವೋ ಎಂಬ ಭಯದಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಿದೆ. ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಸೃಷ್ಟಿಸಿರುವ ಎಸ್‌ಡಿಪಿಐನೊಂದಿಗೆ ಕಾಂಗ್ರೆಸ್ ಕೈಜೋಡಿಸಿ ತನ್ನ ದಲಿತ ಶಾಸಕನ ಮನೆಗೆ ಬೆಂಕಿ ಇಟ್ಟಿದೆ. ತನ್ನ ಶಾಸಕನನ್ನು ರಕ್ಷಿಸದ ಕಾಂಗ್ರೆಸ್ ಜನರನ್ನು ಹೇಗೆ ರಕ್ಷಿಸುತ್ತದೆ. ಸ್ವತಃ ಮಾಜಿ ಮೇಯರ್ ಸಂಪತ್ ರಾಜ್ ಬೆಂಕಿ ಹಚ್ಚಲು ಪ್ರೇರಣೆ ನೀಡಿದ್ದು ಎಂದು ಪೊಲೀಸ್ ತನಿಖಾ ಮೂಲಗಳು ಹೇಳಿವೆ. ಇದರಿಂದ ಭಯದಲ್ಲಿ ಸಂಪತ್ ರಾಜ್ ಆಸ್ಪತ್ರೆಯಿಂದ ತಲೆ ಮರೆಸಿಕೊಂಡಿದ್ದಾರೆ. ತಲೆ ಮರೆಸಿಕೊಳ್ಳಲು ಮೂಲ ಕಾರಣ ಡಿ.ಕೆ.ಶಿವಕುಮಾರ್. ಘಟನೆ ನಡೆದ ಎರಡು ಗಂಟೆಗಳಲ್ಲಿ ಗಲಭೆ ಕೋರರನ್ನು ಹತ್ತಿಕ್ಕಲಾಗಿದೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುತ್ತಿದ್ದರೆ ರಾಜ್ಯಕ್ಕೆ ಬೆಂಕಿ ಬೀಳುತ್ತಿತ್ತು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss