Thursday, August 11, 2022

Latest Posts

ಶಾಸಕ ಭೀಮಾನಾಯ್ಕ್ ಭುಜ ತಟ್ಟಿ ಅವಾಜ್ ಹಾಕಿರುವುದು ಸರಿಯಲ್ಲ: ಸಚಿವ ಶ್ರೀರಾಮುಲು

ಹೊಸ ದಿಗಂತ ವರದಿ, ಬಳ್ಳಾರಿ:

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್ ನಮ್ಮ ಕಾರ್ಯಕರ್ತರ‌ ಮೇಲೆ ಗುಂಪು ಕಟ್ಟಿಕೊಂಡು ಭುಜ ತಟ್ಟಿರುವುದನ್ನು ಗಮನಿಸಿದರೆ ಅವರ ಸಂಸ್ಕ್ರತಿ ಎಂತಹದ್ದು ಎಂಬುದು ಇಷ್ಟರ‌ ಮೇಲೆ ತಿಳಿಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಭಾನುವಾರ ನಗರದಲ್ಲಿ ಮಾತನಾಡಿದ ಅವರು, ಹಗರಿಬೊಮ್ಮನಹಳ್ಳಿ ಪಟ್ಟಣದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ವೇಳೆ ಮಾತಿನ ಚಕಮಕಿಯಲ್ಲಿ ನಮ್ಮ ಕಾರ್ಯಕರ್ತರಿಗೆ ಬೆದರಿಕೆ ಹಾಕುವುದರ ಜೊತೆಗೆ ಬುಜತಟ್ಟಿ ಬಾರೋ‌ ಮಗನೇ ಒಂದು ಕೈ ನೋಡಿಯೇ ಬಿಡ್ತಿನಿ ಎಂದು ಬೆದರಿಕೆ ಹಾಕಿದ್ದಾರೆ. ಇದು ಅವರ ಸ್ಥಾನಕ್ಕೆ ಶೋಭೆ ತರುವಂತಹದ್ದಲ್ಲ, ಅವರ ಈ ಗೊಡ್ಡು ಬೆದರಿಕೆಗೆ ನಮ್ಮ ಕಾರ್ಯಕರ್ತರು ಬಗ್ಗೋಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೀಗೆ ವರ್ತಿಸುವುದು ಸರಿಯಲ್ಲ, ಚುನಾವಣೆ ವೇಳೆ ಶಾಸಕರ ನಡೆಯನ್ನು ನಮ್ಮ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸುವದರ‌ ಜೊತೆಗೆ ಭುಜ ತಟ್ಟಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ. ಚುನಾವಣೆ ವೇಳೆ ನಮ್ಮ ಬಿಜೆಪಿ ಕಾರ್ಯಕರ್ತರು ಯಾರೂ ಕೂಡ ತಪ್ಪು ಮಾಡಿಲ್ಲ. ಗುಂಪು ಕಟ್ಟಿಕೊಂಡು ಬಂದು ದಾಂಧಲೆ ನಡೆಸಿ ಬಿಜೆಪಿ ಅವರ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದರು.
ನ. 17ರಂದು ಕಾಲೇಜು ಆರಂಭ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ಹಾಸ್ಟೆಲ್​ಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಹಾಗೂ ವಸತಿ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಕುರಿರು ಸಂಬಂಧಿಸಿದ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಕಾಲೇಜು, ವಸತಿ ನಿಲಯಗಳನ್ನು ಸ್ಯಾನಿಟೈಸ್​ ಮಾಡಲಾಗುವುದು‌. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ವಿದ್ಯಾರ್ಥಿಗಳಿಗೆ, ಲ್ಯಾಪ್​ಟ್ಯಾಪ್​​ ಹಾಗೂ ನೋಟ್​ಬುಕ್​​ ನೀಡಲು ಚಿಂತನೆ ನಡೆದಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss