ಶಿವಮೊಗ್ಗ: ಶಿಕಾರಿಪುರ ಪುರಸಭೆಯಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಸದಸ್ಯರನ್ನು ಆಪರೇಶನ್ ಕಮಲ ಮಾಡಲಾಗಿದೆ ಎಂದು ಪುರಸಭಾ ಸದಸ್ಯ ಮಯೂರ್ ದರ್ಶನ್ ಉಳ್ಳಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿಕಾರಿಪುರ ಪುರಸಭೆಗೆ ಕಳೆದ ಚುನಾವಣೆಯಲ್ಲಿ 12 ಮಂದಿ ಕಾಂಗ್ರೆಸ್, 08 ಮಂದಿ ಬಿಜೆಪಿ ಸದಸ್ಯರು ಆಯ್ಕೆಯಾಗಿ ಕಾಂಗ್ರೆಸ್ ಬಹುಮತ ಪಡೆದುಕೊಂಡಿತ್ತು. ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲೇ ಮುಖಭಂಗ ಆಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಈಗ ಇಬ್ಬರು ಕಾಂಗ್ರೆಸ್ ಸದಸ್ಯರ ರಾಜೀನಾಮೆ ಕೊಡಿಸಿದ್ದಾರೆ. ಇದರ ಹಿಂದೆ ಸಂಸದರು ಮತ್ತು ಮುಖ್ಯಮಂತ್ರಿಗಳ ಕೈವಾಡವಿದೆ ಎಂದು ಆರೋಪಿಸಿದರು.
ಪುರಸಭೆ ಚುನಾವಣೆ ನಡೆದು ಒಂದು ವರ್ಷ ಎರಡು ತಿಂಗಳಾದರೂ ಇನ್ನೂ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಕಟ ಮಾಡಲು ಆಗಿಲ್ಲ. ಇದರ ನಡುವೆ ಆಪರೇಶನ್ ಕಮಲ ಮಾಡಿ ಮರ್ಯಾದೆ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.