Wednesday, July 6, 2022

Latest Posts

ಶಿಕ್ಷಕರ ವರ್ಗಾವಣೆ ಕೋರಿ 73 ಸಾವಿರ ಅರ್ಜಿ, 50 ಸಾವಿರ ಮಂದಿಗೆ ಅನುಕೂಲ

ಹೊಸ ದಿಗಂತ ವರದಿ, ಕೋಲಾರ:

ಈ ಬಾರಿಯ ಶಿಕ್ಷಕರ ವರ್ಗಾವಣೆ ಕೋರಿ 73 ಸಾವಿರ ಅರ್ಜಿಗಳು ಬಂದಿದ್ದು, 50 ಸಾವಿರ ಮಂದಿಗೆ ಅನುಕೂಲವಾಗಲಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರ ಹೊರವಲಯದ ಎಸ್‌ಡಿಸಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜ.1ರಿಂದ ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ಕೋವಿಡ್ ಮಾರ್ಗಸೂಚಿ ಪಾಲನೆಗಾಗಿ ನಡೆದ ಪೂರ್ವಸಿದ್ದತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ವರ್ಗಾವಣೆ ನೀತಿ ಬದಲಾದ ಕಾರಣ ಹೆಚ್ಚು ಶಿಕ್ಷಕರಿಗೆ ಪ್ರಯೋಜನವಾಗಲಿದೆ ಎಂದ ಅವರು, ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಪರಿಷತ್ ಸದಸ್ಯರು ಬದ್ದರಾಗಿದ್ದು, ದೂರವಾಣಿ, ಆನ್‌ಲೈನ್‌ನಲ್ಲಿ ಮಾಹಿತಿ ನೀಡಿದರೂ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶಿಕ್ಷಕರಿಗೆ ಬಡ್ತಿ ಪ್ರಕ್ರಿಯೆ ಜಿಲ್ಲೆಯಲ್ಲಿ ವಿಳಂಬವಾಗಿರುವ ಕುರಿತು ಬಂದ ದೂರುಗಳಿಗೆ ಉತ್ತರಿಸಿ, ಡಿಡಿಪಿಐ ಅವರು ಕೂಡಲೇ ಕ್ರಮವಹಿಸಲು ಸೂಚಿಸಿದರು.
ಡಾಕ್ಟರೇಟ್ ಪಡೆದ ಬಿಇಒಗೆ ಅಭಿನಂದನೆ
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಶೈಕ್ಷಣಿಕ ಸುಧಾರಣೆ, ಶಾಲಾ ಸ್ವಚ್ಚತೆ ಮತ್ತಿತರ ಕಾರಣಗಳಿಗಾಗಿ ಡಾಕ್ಟರೇಟ್ ಗೌರವ ಪಡೆದಿರುವ ಬಿಇಒ ಕೆ.ಎಸ್.ನಾಗರಾಜ ಗೌಡ ಅವರನ್ನು ವೈ.ಎ.ಎನ್ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಬಿಇಒ ನಾಗರಾಜ ಗೌಡ ಮಾತನಾಡಿ, ಶಾಲೆಗಳು ಜ.1ರಿಂದ ಆರಂಭಕ್ಕೆ ಸೂಚನೆ ನೀಡಿದ್ದು, ಈ ಸಂಬಂಧ ಶಾಲೆಗಳಲ್ಲಿ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಲು ಸೂಚಿಸಿದರು.
ಈಗಾಗಲೇ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯಡಿ ಕೆಲಸ ಮಾಡಲು ಮುಖ್ಯಶಿಕ್ಷಕರಿಗೆ ಮನವಿ ಮಾಡಿದ ಅವರು, ಶಾಲೆಗಳಲ್ಲಿ ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್ ಧಾರಣೆ, ಶಾಲೆಗಳ ಸ್ವಚ್ಚತೆ ಕಾಪಾಡಲು ತಿಳಿಸಿ, ಶಾಲಾ ಆವರಣದಲ್ಲಿ ತಿಂಡಿ ಸೇವಗೆ ಅವಕಾಶ ಬೇಡ ಎಂದರು.
ಶಾಲಾ ಆವರಣ, ಶೌಚಾಲಯ ಸ್ವಚ್ಚತೆಗೆ ಗಮನಹರಿಸಿ, ಮಕ್ಕಳಿಗೆ ಬಿಸಿನೀರು ಕುಡಿಯಲು ವ್ಯವಸ್ಥೆ ಮಾಡಿ ಎಂದು ಸೂಚಿಸಿದ ಅವರು, ಪಾಳಿ ಪದ್ದತಿ ಮೂಲಕ ಸಾಮಾಜಿಕ ಅಂತರಕ್ಕೆ ಧಕ್ಕೆಯಾಗದಂತೆ ತರಗತಿ ನಡೆಸಲು ಸೂಚಿಸಿದರು.
ಇದಕ್ಕೂ ಮುನ್ನಾ ಡಿಡಿಪಿಐ ಕೃಷ್ಣಮೂರ್ತಿ ಸಭೆಗೆ ಆಗಮಿಸಿ ಕೋವಿಡ್ ಮಾರ್ಗಸೂಚಿ ಪಾಲನೆ ಕುರಿತು ಮುಖ್ಯಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಎಸ್‌ಡಿಸಿ ಶಾಲೆ ಅಧ್ಯಕ್ಷೆ ಉಷಾ ಗಂಗಾಧರ್, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ,ನೌಕರರ ಸಂಘದ ಮಾಜಿ ಖಜಾಂಚಿ ಎಸ್.ಚೌಡಪ್ಪ,ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ್,  ಬಿಆರ್‌ಸಿ ರಾಮಕೃಷ್ಣಪ್ಪ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ಬೈರಡ್ಡಿ, ಆರ್.ಶ್ರೀನಿವಾಸನ್, ಬಿಆರ್‌ಪಿಗಳಾದ ಪ್ರವೀಣ್, ನಾಗರಾಜ್ ಸೇರಿದಂತೆ ಎಲ್ಲಾ ಸಿಆರ್‌ಪಿಗಳು, ಮುಖ್ಯಶಿಕ್ಷಕರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss